ಭಯೋತ್ಪಾದನೆಯನ್ನು ತಿರಸ್ಕರಿಸಿದ ಭಾರತೀಯ ಮುಸ್ಲಿಮರು
ಒಬಾಮ ಸರಕಾರದಿಂದ ಶ್ಲಾಘನೆ

ವಾಷಿಂಗ್ಟನ್ :ಭಯೋತ್ಪಾದಕರ ಸಂಘಟನೆಗಳ ಆಮಿಷಗಳಿಗೆ ಬಲಿಯಾಗದೆ ಅವುಗಳನ್ನು ತಿರಸ್ಕರಿಸಿರುವ ಭಾರತೀಯ ಮುಸ್ಲಿಮರನ್ನು ಒಬಾಮಾ ಆಡಳಿತ ಶ್ಲಾಘಿಸಿದೆ. ‘‘ಭಾರತದ ಮುಸ್ಲಿಮರಭಯೋತ್ಪಾದಕರ ಆಮಿಷಗಳ ವಿರುದ್ಧ ದೃಢವಾಗಿದ್ದಾರೆ,’’ಎಂದುದಕ್ಷಿಣ ಮತ್ತು ಮಧ್ಯ ಏಷ್ಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ಇತ್ತೀಚೆಗೆ ನಡೆದ ವಿದೇಶಾಂಗ ಸಂಬಂಧಗಳ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ.
‘‘ಭಾರತದಲ್ಲಿ ಉಗ್ರಗಾಮಿಗಳ ಸಿದ್ಧಾಂತ ಬೇರು ಬಿಡಲು ವಿಫಲವಾಗಿದೆಯೆಂದು ನಾವು ನೋಡಿದ್ದೇವೆ,’’ ಎಂದು ಸೆನೆಟರ್ ಕ್ರಿಸ್ ಮರ್ಫಿಯವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.
ಸೌದಿಗಳು ಭಾರತದಲ್ಲಿ ಶಾಲೆಗಳು ಮತ್ತು ಮದರಸಾಗಳ ಸ್ಥಾಪನೆಗೆ ಹೂಡಿಕೆ ಮಾಡುತ್ತಿರುವ ಬಗ್ಗೆ ಮರ್ಫಿ ಕಳವಳ ವ್ಯಕ್ತಪಡಿಸಿದಾಗ, ‘‘ಅಮೆರಿಕಾ ಸರಕಾರ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಈ ವಿಚಾರವನ್ನು ಎರಡೂ ರಾಷ್ಟ್ರಗಳ ನಡುವೆ ನಡೆಯಬಹುದಾದ ಮಾತುಕತೆಗಳ ಸಮಯದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
‘‘ಹಿಂದೆ ಇಂತಹ ವಿಚಾರಗಳ ಬಗ್ಗೆ ಭಾರತದೊಂದಿಗೆ ಚರ್ಚೆ ನಡೆಸಿದಾಗೆಲ್ಲ ನಮಗೆ ಯಶಸ್ಸು ದೊರೆತಿದೆ,’’ಎಂದು ಹೇಳಿದ ನಿಶಾ ‘‘ಭಾರತದಲ್ಲಿ ಕೂಡ ವಿದೇಶಗಳಿಂದ, ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಿಂದ ಹರಿದು ಬರುತ್ತಿರುವ ಹಣದ ಮೂಲವನ್ನು ಗುರುತಿಸುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ’’ ಎಂದು ಹೇಳಿದರು.
ಈ ವಿಚಾರದಲ್ಲಿ ಭಾರತ ಹಾಗೂ ಅಮೇರಿಕಾ ನಡುವೆ ಉತ್ತಮ ಸಹಕಾರವಿದೆಯೆಂದೂ ಅವರು ತಿಳಿಸಿದರು.





