ಸರಕಾರ ಎರಡು ವರ್ಷ ಪೂರೈಸಿದ ಸಂದರ್ಭ ಮಿತ್ರ ಪಕ್ಷ ಶಿವಸೇನೆಯ ಟೀಕಾಪ್ರಹಾರ
‘ಎಲ್ಲಾ ರಂಗಗಳಲ್ಲಿಯೂ ಮೋದಿ ಸರಕಾರ ವಿಫಲ’

ಮುಂಬೈ :ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಣದುಬ್ಬರವನ್ನು ನಿಯಂತ್ರಿಸಲು, ಉಗ್ರವಾದ ಸಮಸ್ಯೆನಿವಾರಿಸಲು ಹಾಗೂ ಹಲವಾರು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ವಿಫಲವಾಗಿದೆಯೆಂದು ನರೇಂದ್ರ ಮೋದಿ ಸರಕಾರ ಎರಡು ವರ್ಷ ಆಡಳಿತ ಪೂರೈಸುತ್ತಿದ್ದಂತೆಯೇ ಅದರ ಮಿತ್ರಪಕ್ಷವಾದ ಶಿವ ಸೇನೆ ಗುರುವಾರದಂದು ಕೇಂದ್ರ ಸರಕಾರದ ವಿರುದ್ಧಹರಿಹಾಯ್ದಿದೆ.
ಪ್ರಧಾನಿ ಮೋದಿಯ ಹಲವಾರು ವಿದೇಶ ಪ್ರವಾಸಗಳನ್ನೂ ಟೀಕಿಸಿದ ಶಿವಸೇನೆ ತಮ್ಮ ನಿವಾಸ ಭಾರತದಲ್ಲಿದೆಯೇ ಅಥವಾ ದೇಶದ ಹೊರಗಿದೆಯೇ ಎಂಬುದನ್ನು ಅವರು ಮೊದಲು ನಿರ್ಧರಿಸಬೇಕು ಎಂದು ಹೇಳಿದೆ. ‘‘ಕಳೆದ ಎರಡು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಭ್ರಷ್ಟಾಚಾರ ಪ್ರಕರಣಗಳು ನಡೆಯದೇ ಹೋದರೂ ಸರಕಾರ ಹಣದುಬ್ಬರವನ್ನು ತಡೆಗಟ್ಟಲು, ಬೆಲೆಯೇರಿಕೆಯನ್ನು ನಿಯಂತ್ರಿಸಲು ಮತ್ತು ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಸಹಾಯ ಹಸ್ತ ಚಾಚಲು ವಿಫಲವಾಗಿದೆ,’’ ಎಂದು ಶಿವಸೇನೆ ತನ್ನ ಸಂಪಾದಕೀಯ ಸಾಮ್ನಾದಲ್ಲಿ ಹೇಳಿದೆ.
ವಿದೇಶಗಳಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವ ಕುರಿತಾಗಿಯೂ ನೀಡಿದ ಆಶ್ವಾಸನೆಗಳನ್ನು ಈಡೇರಿಸದಿರುವ ಸರಕಾರವನ್ನು ಟೀಕಿಸಿದಶಿವಸೇನೆ ಸರಕಾರ ಇನ್ನೂ ಈಡೇರಿಸದ ಪ್ರಮುಖ ಆಶ್ವಾಸನೆ ಇದೆಂದು ಹೇಳಿದೆ.
‘‘ಕಾಶ್ಮೀರದಲ್ಲಿ ಪಾಕಿಸ್ತಾನೀಯರಿಂದ ನಡೆಯುತ್ತಿರುವ ಉಗ್ರ ಚಟುವಟಿಕೆಗಳು ಇನ್ನೂ ನಿಂತಿಲ್ಲ. ನಮ್ಮ ಜವಾನರು ಉಗ್ರವಾದಿಗಳ ಹಾಗೂ ನಕ್ಸಲರ ವಿರುದ್ಧ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಆದರೂ ನಾವು ನಮ್ಮ ನೆರೆಯ ರಾಷ್ಟ್ರದೊಂದಿಗೆ ಈಗಲೂ ಮಾತುಕತೆ ನಡೆಸುತ್ತಿದ್ದೇವೆ,’’ಎಂದು ಸರಕಾರವನ್ನು ಶಿವಸೇನೆ ಜಾಲಾಡಿದೆ.
‘‘ಕೇರಳ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಬಿಹಾರದ ಜನರು ಮೋದಿ ಸರಕಾರದ ಸಾಧನೆಯನ್ನು ತಮ್ಮ ವಿಧದಲ್ಲಿಯೇ ವಿಮರ್ಶಿಸಿದ್ದಾರೆಂಬುದನ್ನು ಅಲ್ಲಿನ ಚುನಾವಣಾ ಫಲಿತಾಂಶಗಳೇ ಹೇಳುತ್ತವೆ,’’ಎಂದು ಶಿವಸೇನೆ ತಿಳಿಸಿದೆ.







