ಸುಳ್ಯ ನಗರ ಪಂಚಾಯತ್ ಆಡಳಿತದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಸುಳ್ಯ, ಮೇ 26: ಸುಳ್ಯ ನಗರ ಪಂಚಾಯತ್ ಆಡಳಿತವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದಿಂದ ಕೂಡಿದೆ ಎಂದು ಆರೋಪಿಸಿ, ಕಲ್ಲುಮುಟ್ಲು ಪಂಪ್‌ಹೌಸ್‌ನಲ್ಲಿ ನಡೆದ ಭೋಜನಕೂಟವನ್ನು ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಹಯೋಗದಲ್ಲಿ ಗುರುವಾರ ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ನಗರ ಪಂಚಾಯತ್ ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಗರ ಪಂಚಾಯತ್‌ನ ಮುಖ್ಯ ಗೇಟಿನ ಎದುರು ಧರಣಿ ನಿರತರಾದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಆಡಳಿತದ ವಿರುದ್ಧ ತೀವ್ರವಾಗಿ ಹರಿಹಾಯ್ದರು. ನಗರ ಪಂಚಾಯತ್‌ನಲ್ಲಿ ಯಾವುದೇ ಕ್ರಿಯಾ ಯೋಜನೆ, ಟೆಂಡರ್ ಇಲ್ಲದೆ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಮಾಡುತ್ತಿರುವುದು ಕೂಡಾ ಅಧ್ಯಕ್ಷರ ಚೇಲಾಗಳು ಹಾಗೂ ಅವರ ಪಕ್ಷಕ್ಕೆ ಕೆಲಸ ಮಾಡಿದ ಕಾರ್ಯಕರ್ತರು. ಬೇರೆ-ಬೇರೆ ಕೆಲಸ ಮಾಡುವವರೆಲ್ಲಾ ಈಗ ಗುತ್ತಿಗೆದಾರರಾಗಿದ್ದಾರೆ ಎಂದರು.
ಮುಖ್ಯಾಧಿಕಾರಿ ವಿರುದ್ಧ ಗರಂ
ಮುಖ್ಯಾಧಿಕಾರಿ ವಿರುದ್ಧವೂ ವಾಗ್ದಾಳಿ ಹರಿಸಿದ ವೆಂಕಪ್ಪ ಗೌಡ, ದುಗ್ಗಲಡ್ಕದ ನೀರಿನ ಸಮಸ್ಯೆ ಕುರಿತಂತೆ ಮುಖ್ಯಾಧಿಕಾರಿಗೆ ಕರೆ ಮಾಡಿ ಮಾತನಾಡಿದಾಗ, ‘ನನನ್ನು ಸಸ್ಪೆಂಡ್ ಮಾಡಿಸುತ್ತೀರಾ’ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಮನಸ್ಸು ಮಾಡಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾತ್ರವಲ್ಲ, ಡಿಸ್‌ಮಿಸ್ ಮಾಡಲೂ ಗೊತ್ತಿದೆ, ನಾಲಗೆ ಬಿಗಿ ಹಿಡಿದು ಮಾತನಾಡುವುದನ್ನು ಅವರು ಕಲಿಯಬೇಕು ಎಂದು ಹೇಳಿದರು.
ಪಂಪ್ ಹೌಸ್‌ನಲ್ಲಿ ನಡೆದ ಭೋಜನಕೂಟ ಪ್ರಕರಣವನ್ನು ಉಲ್ಲೇಖಿಸಿದ ವೆಂಕಪ್ಪಗೌಡ, ಉಳಿದ ಕಡೆಗಳಲ್ಲೆಲ್ಲಾ ವೀರಾವೇಶದ ಮಾತುಗಳನ್ನಾಡುವ ಅಧ್ಯಕ್ಷರಿಗೆ ಆ ಘಟನೆ ನಡೆದಾಗ ಆ ವೀರಾವೇಷ ಎಲ್ಲಿಗೆ ಹೋಗಿತ್ತು? ಕೇರಳ ಚುನಾವಣೆಗೆ ಪ್ರಚಾರಕ್ಕೆ ಹೋದವರಿಗೆ ಸಂತೋಷ ಕೂಟ ಪಂಪ್‌ಹೌಸ್‌ನಲ್ಲಿ ನಡೆದಿದೆ. ಈ ಕುರಿತು ಅವರು ಪ್ರಮಾಣ ಮಾಡಲಿ. ನಿರ್ಬಂಧಿತ ಪ್ರದೇಶದಲ್ಲಿ ಭೋಜನಕೂಟವನ್ನು ಆಕ್ಷೇಪಿಸಿದವರೊಂದಿಗೆ ಹೆಗ್ಡೆಯವರು ಅತ್ಯಂತ ಕೆಟ್ಟ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆದರೆ ನಂತರ ತನ್ನ ತಪ್ಪಿನ ಅರಿವಾಗಿ ತಾವು ಇದುವರೆಗೆ ಬೈಯುತ್ತಿದ್ದ ಒಂದು ವರ್ಗದ ನಾಯಕರ ಮನೆಗೆ ಹೋಗಿ ಕೈ ಕಾಲು ಹಿಡಿದು ಕ್ಷಮೆ ಕೋರಿದ್ದಾರೆ. ಇಂತಹವರು ಯಾವ ಸೀಮೆಯ ರಾಜಕಾರಣಿ? ಹಿಂದೂ ಸಂಘಟನೆಯವರು ಯಾಕೆ ಇದನ್ನು ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಜನ ವಿರೋಧಿ ಆಡಳಿತ
ನಗರ ಪಂಚಾಯತ್ ವಿಪಕ್ಷ ನಾಯಕ ಕೆ.ಎಂ.ಮುಸ್ತಫ ಮಾತನಾಡಿ, ನ.ಪಂ. ಆಡಳಿತವು ಜನಪರ ಕೆಲಸಗಳನ್ನು ನಡೆಸಲು ವಿಫಲವಾಗಿದೆ ಎಂದು ಜನರಿಗೆ ತೋರಿಸಿಕೊಡಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೆ ಆಡಳಿವನ್ನು ಜನ ತಿರಸ್ಕರಿಸಿದ್ದಾರೆ ಎಂದು ಅರ್ಥ. ಇಲ್ಲಿ ಕ್ರಿಯಾ ಯೋಜನೆಗಳು ರಾತ್ರೋ ರಾತ್ರಿ ತಯಾರಾಗುತ್ತವೆ. ರಾಜ್ಯ ಸರಕಾರ ಆಶ್ರಯ ಯೋಜನೆ ಸಾಲ ಮನ್ನಾ ಮಾಡಿದ್ದರೂ ಇಲ್ಲಿನ ಫಲಾನುಭವಿಗಳಿಗೆ ನಗರ ಪಂಚಾಯತ್ ಈ ಸೌಲಭ್ಯ ದೊರಕಿಸಿಕೊಡುತ್ತಿಲ್ಲ. ಕಲ್ಚರ್ಪೆಯ ಘನತ್ಯಾಜ್ಯ ಘಟಕದ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯ ಡಾ.ರಘು ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಗರ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಅಂಬೆಕಲ್ಲು ಮಾತನಾಡಿದರು.
ನಗರ ಪಂಚಾಯತ್ ಸದಸ್ಯರಾದ ಶಿವಕುಮಾರ್ ಕಂದಡ್ಕ, ಶ್ರೀಲತಾ ಪ್ರಸನ್ನ, ಪ್ರೇಮಾ ಟೀಚರ್, ನಝಿರ್ ಜಯನಗರ, ಪುರುಷೋತ್ತಮ ಬಂಗಾರಕೋಡಿ, ಶಶಿಕಲಾ ದುಗ್ಗಲಡ್ಕ, ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್, ಕಾಂಗ್ರೆಸ್ ನಾಯಕರಾದ ಮಹೇಶ್ ಕುಮಾರ್ ಕರಿಕ್ಕಳ, ಸುಧೀರ್ ರೈ ಮೇನಾಲ, ಎಸ್.ಸಂಶುದ್ದೀನ್, ಪಿ.ಎ.ಮುಹಮ್ಮದ್, ಸತ್ಯಕುಮಾರ್ ಆಡಿಂಜ, ಅಶೋಕ್ ಚೂಂತಾರು, ನೆಕ್ರಪ್ಪಾಡಿ ಕೃಷ್ಣಪ್ಪಗೌಡ, ಲಕ್ಷ್ಮಣ ಶೆಣೈ, ಮುಹಮ್ಮದ್ ಪವಾಝ್, ಜೂಲಿಯಾನ ಕ್ರಾಸ್ತಾ, ಸುಜಯಕೃಷ್ಣ, ಸನತ್ ಮುಳುಗಾಡು, ಗೀತಾ ಕೋಲ್ಚಾರು, ಅಬ್ದುಲ್ ಮಜೀದ್, ಶ್ರೀಹರಿ ಕುಕ್ಕುಡೇಲು, ನಂದರಾಜ್ ಸಂಕೇಶ, ಮೂಸಾಕುಂಞಿ ಪೈಂಬೆಚ್ಚಾಲ್, ಅಬೂಬಕರ್ ಅಡ್ಕಾರ್, ಸುರೇಶ್ ಅಮೈ, ತೇಜಪ್ರಕಾಶ್ ಬುಡ್ಲೆಗುತ್ತು, ಭವಾನಿಶಂಕರ ಕಲ್ಮಡ್ಕ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ್ ಅನಂತ ಶಂಕರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.







