ಕಾಂಗೊ: ಭಾರತೀಯರ ಅಂಗಡಿಗಳ ಮೇಲೆ ದಾಳಿ
ಭಾರತದಲ್ಲಿ ನಡೆದ ಅಲ್ಲಿನ ವಿದ್ಯಾರ್ಥಿಯ ಹತ್ಯೆಗೆ ಪ್ರತೀಕಾರ?

ಹೊಸದಿಲ್ಲಿ, ಮೇ 26: ಕಾಂಗೊ ದೇಶದಲ್ಲಿ ವಾಸಿಸುತ್ತಿರುವ ಕೆಲವು ಭಾರತೀಯರ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕಾಂಗೊ ವಿದ್ಯಾರ್ಥಿಯ ಹತ್ಯೆಗೆ ಇದು ಪ್ರತೀಕಾರವಾಗಿರುವ ಸಾಧ್ಯತೆಯಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
‘‘ಕಾಂಗೊದಲ್ಲಿರುವ ನಮ್ಮ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಈಗ ಪರಿಸ್ಥಿತಿ ಸುಧಾರಿಸಿದೆ. ಕಾಂಗೊದೊಂದಿಗಿನ ಭಾರತದ ಸಂಬಂಧ ತುಂಬಾ ಹಿಂದಿನದ್ದಾಗಿದೆ’’ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ಹೇಳಿದೆ.
ದಾಳಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಅದು ತಿಳಿಸಿದೆ.
ಕಳೆದ ವಾರ ಕಾಂಗೊದ ವಿದ್ಯಾರ್ಥಿಯ ಹತ್ಯೆ ನಡೆದ ಬಳಿಕ, ಅಪರಾಧಿಗಳನ್ನು ಕ್ಷಿಪ್ರವಾಗಿ ಶಿಕ್ಷಿಸಲಾಗುವುದು ಎಂಬ ಭರವಸೆಯನ್ನು ಭಾರತ ನೀಡಿದೆ. ಭಾರತದಲ್ಲಿ ವಾಸಿಸುತ್ತಿರುವ ಆಫ್ರಿಕನ್ನರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಲವಾರು ಆಫ್ರಿಕನ್ ರಾಯಭಾರ ಕಚೇರಿಗಳು ಭಾರತವನ್ನು ಒತ್ತಾಯಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಳೆದ ವಾರದ ದಾಳಿಯಲ್ಲಿ ಮೃತಪಟ್ಟಿರುವ ಮಸುಂಡ ಕಿಟಡ ಒಲಿವರ್ ಪದವಿ ವಿದ್ಯಾರ್ಥಿಯಾಗಿದ್ದರು. ಅವರು ಭಾರತದಲ್ಲಿ ಆರು ವರ್ಷಗಳಿಗೂ ಹೆಚ್ಚು ಕಾಲ ವಾಸಿಸಿದ್ದರು ಎಂದು ಹೊಸದಿಲ್ಲಿಯಲ್ಲಿರುವ ಕಾಂಗೊ ರಾಯಭಾರ ಕಚೇರಿ ಹೇಳಿದೆ.
ಕಳೆದ ಶುಕ್ರವಾರ ರಾತ್ರಿ ರಿಕ್ಷಾವೊಂದನ್ನು ಬಾಡಿಗೆಗೆ ಪಡೆಯುವ ವಿಚಾರದಲ್ಲಿ ದಿಲ್ಲಿಯ ವಸಂತಕುಂಜ್ ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು ಮಸುಂಡ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಮಸುಂಡ ಚಿಕಿತ್ಸೆ ಫಲಕಾರಿಯಾಗದೆ ಒಂದು ದಿನದ ಬಳಿಕ ಅಸು ನೀಗಿದ್ದರು.
ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಶೋಧ ನಡೆಯುತ್ತಿದೆ.







