ಇಲ್ಲಿನ ಪ್ರಜೆಗಳು ತಿಂಗಳಿಗೆ 1.7 ಲಕ್ಷ ರೂ. ಪಡೆಯಬಲ್ಲರು
ಇದು ಸ್ವಿಝರ್‌ಲ್ಯಾಂಡ್

ಬರ್ನ್, ಮೇ 26: ತನ್ನ ಪ್ರಜೆಗಳಿಗೆ ನಿಶ್ಚಿತ ಆದಾಯವಾಗಿ ತಿಂಗಳಿಗೆ 2,500 ಡಾಲರ್ (ಸುಮಾರು 1.7 ಲಕ್ಷ ರೂಪಾಯಿ) ಪಾವತಿಸುವ ಪ್ರಸ್ತಾಪವೊಂದನ್ನು ಸ್ವಿಝರ್‌ಲ್ಯಾಂಡ್ ಸರಕಾರ ಪರಿಶೀಲಿಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ಪ್ರಸ್ತಾಪದ ಬಗ್ಗೆ ಜೂನ್ 5ರಂದು ನಡೆಯಲಿರುವ ಜನಮತಗಣನೆಯಲ್ಲಿ ಪ್ರಜೆಗಳು ಮತಹಾಕಲಿದ್ದಾರೆ. ಇದರೊಂದಿಗೆ, ತನ್ನ ಪ್ರತಿಯೊಬ್ಬ ಪ್ರಜೆಗೆ ಹಣದ ರೂಪದಲ್ಲಿ ನಿಶ್ಚಿತ ಸ್ಟೈಪಂಡ್ ನೀಡುವುದಕ್ಕಾಗಿ ಜನಮತಗಣನೆ ಏರ್ಪಡಿಸಿದ ಜಗತ್ತಿನ ಮೊದಲ ದೇಶ ಸ್ವಿಝರ್‌ಲ್ಯಾಂಡ್ ಆಗಲಿದೆ.
ಕಲಾವಿದರು, ಬರಹಗಾರರು ಮತ್ತು ಬುದ್ಧಿಜೀವಿಗಳು ರೂಪಿಸಿದ ಈ ಪ್ರಸ್ತಾಪದನ್ವಯ, ಪ್ರತಿಯೋರ್ವ ವಯಸ್ಕ ಸ್ವಿಸ್ ನಿವಾಸಿ ಪ್ರತಿ ತಿಂಗಳು 2,500 ಫ್ರಾಂಕ್ (ಪ್ರಸಕ್ತ ಒಂದು ಸ್ವಿಸ್ ಫ್ರಾಂಕ್ ಒಂದು ಡಾಲರ್‌ಗೆ ಸಮ) ಹಾಗೂ ಮಕ್ಕಳು 625 ಫ್ರಾಂಕ್ ಮೊತ್ತವನ್ನು ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ನಿವಾಸಿಗಳ ಉದ್ಯೋಗಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಈ ಯೋಜನೆಗೆ ಸರಕಾರಕ್ಕೆ ವಾರ್ಷಿಕ 200 ಬಿಲಿಯ ಡಾಲರ್ (ಸುಮಾರು 13.5 ಲಕ್ಷ ಕೋಟಿ ರೂಪಾಯಿ) ವೆಚ್ಚ ತಗಲಲಿದೆ.
ಆದರೆ, ಇದಕ್ಕೆ ರಾಜಕೀಯ ಪಕ್ಷಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎಂದು ಡೇಲಿಮೇಲ್.ಕೊ.ಯುಕೆ ವೆಬ್‌ಸೈಟ್‌ಹೇಳಿದೆ.
ಅದೇ ವೇಳೆ, ನಿಶ್ಚಿತ ಆದಾಯವು ಜನರ ಕೆಲಸ ಮಾಡುವ ಬಯಕೆಯನ್ನು ಕುಗ್ಗಿಸುತ್ತದೆ ಎಂದು ಪ್ರಸ್ತಾಪದ ವಿರೋಧಿಗಳು ಹೇಳುತ್ತಾರೆ.







