ಜಪಾನ್: ರೋಬಟ್ ಮೊಬೈಲ್ ಮಾರಾಟ ಆರಂಭ

ಟೋಕಿಯೊ, ಮೇ 26: ಜಗತ್ತಿನ ಪ್ರಥಮ ರೋಬಟ್ ಮೊಬೈಲ್ ಫೋನ್ ‘ರೋಬೊಹಾನ್’ನ ಮಾರಾಟ ಜಪಾನ್‌ನಲ್ಲಿ ಗುರುವಾರ ಆರಂಭವಾಗಿದೆ. ಜೇಬಿನಲ್ಲಿ ಹಿಡಿಯುವ ಗಾತ್ರದ ಈ ಮೊಬೈಲ್ ಫೋನ್, ನಡೆದಾಡುತ್ತದೆ ಹಾಗೂ ನೃತ್ಯ ಮಾಡುತ್ತದೆ.
ಜಪಾನ್‌ನ ಇಲೆಕ್ಟ್ರಾನಿಕ್ಸ್ ಕಂಪೆನಿ ಶಾರ್ಪ್ ಮತ್ತು ಇಂಜಿನಿಯರ್ ಟೊಮೊಟಕ ಟಕಹಶಿ ಅಭಿವೃದ್ಧಿಪಡಿಸಿರುವ ಈ ಮಾನವ ಆಕಾರದ ಸ್ಮಾರ್ಟ್‌ಫೋನ್‌ಗೆ 1,98,000 ಯೆನ್ (ಸುಮಾರು 1.21 ಲಕ್ಷ ರೂಪಾಯಿ) ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ಇಎಫ್‌ಇ ನ್ಯೂಸ್ ವರದಿ ಮಾಡಿದೆ.
ಟೊಮೊಟಕ ಟಕಹಶಿ ಈ ಮೊದಲು ಪ್ರಥಮ ರೋಬಟ್ ಗಗನಯಾತ್ರಿ ‘ಕಿರೊಬೊ’ವನ್ನು ವಿನ್ಯಾಸಗೊಳಿಸಿದ್ದರು.
ಕಂಪೆನಿಯು ಟೋಕಿಯೊದಲ್ಲಿ ರೋಬೊಹಾನ್ ಕೆಫೆಯನ್ನು ಆರಂಭಿಸಿದ್ದು, ಇಲ್ಲಿ ಜನರು ಈ ಸ್ಮಾರ್ಟ್‌ಫೋನ್‌ಗಳನ್ನು ಜೂನ್ 7ರವರೆಗೆ ಪರೀಕ್ಷೆ ನಡೆಸಬಹುದಾಗಿದೆ.
ಆ್ಯಂಡ್ರಾಯ್ಡಾ ಕಾರ್ಯಾಚರಣಾ ವ್ಯವಸ್ಥೆ ಹೊಂದಿರುವ ಮೊಬೈಲ್ ವಿವಿಧ ಅಪ್ಲಿಕೇಶನ್‌ಗಳನ್ನು ಒದಗಿಸಲಿದೆ.
ಜಪಾನ್‌ನ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಕ ಸಂಸ್ಥೆಯು ತಿಂಗಳಿಗೆ 5,000 ಫೋನ್‌ಗಳನ್ನು ಉತ್ಪಾದಿಸುತ್ತಿದೆ. ಈ ಸಂಬಂಧ ಅದು ತೈವಾನ್‌ನ ಹಾನ್ ಹೈ (ಫಾಕ್ಸ್‌ಕಾನ್) ಎಂಬ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾನ್ ಹೈ ಐಫೋನ್‌ಗಳು ಮತ್ತು ಐಪ್ಯಾಡ್‌ಗಳನ್ನು ಆ್ಯಪಲ್ ಕಂಪೆನಿಗಾಗಿ ಜೋಡಿಸಿಕೊಡುವ ಕೆಲಸ ಮಾಡುತ್ತಿದೆ.
ರೋಬೊಹಾನ್ ತನ್ನ ಮುಂಭಾಗದ ಕ್ಯಾಮರವನ್ನು ಬಳಸಿ ಜನರ ಮುಖಗಳನ್ನು ಗುರುತಿಸಿ ಅವರನ್ನು ಹೆಸರಿನಿಂದ ಕರೆಯುತ್ತದೆ.







