ಪುತ್ತೂರು ದೇವಳದ ಕಾರ್ಯನಿರ್ವಹಣಾಧಿಕಾರಿ ನೀಡಿದ ನೋಟಿಸ್‌ಗೆ ರವೀಶ್ ತಂತ್ರಿ ಉತ್ತರ

ಪುತ್ತೂರು, ಮೇ 26: ಕೇರಳದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವಾಲಯದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳಿಗೆ ನೀಡಿದ ಕಾರಣ ಕೇಳಿಕೆ ನೊಟೀಸ್‌ಗೆ ತಂತ್ರಿಗಳು ಉತ್ತರಿಸಿದ್ದು, ತನಗೆ ನೊಟೀಸು ನೀಡುವ ಅಧಿಕಾರ ಕಾರ್ಯನಿರ್ವಹಣಾಧಿಕಾರಿಗೆ ಇರುವುದಿಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಉತ್ತರದಲ್ಲಿನ ಅಂಶಗಳು
ಪುತ್ತೂರು ದೇವಾಲಯದ ತಂತ್ರಿಯಾಗಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆ ನನ್ನನ್ನು ನಿಯುಕ್ತಿ ಮಾಡಿದೆ. ದೇವಾಲಯದ ಆಡಳಿತವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ತಂತ್ರಿಗಳಿಗೆ ಕಾರಣ ಕೇಳುವ, ನೋಟಿಸು ನೀಡುವ ಹಕ್ಕು ಯಾ ಅಧಿಕಾರ ಇರುವುದಿಲ್ಲ.
ತಂತ್ರಿ ಹುದ್ದೆಯಲ್ಲಿರುವವರು ದೇವಾಲಯದ ನೌಕರರಲ್ಲ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸೇವಾ ನಿಯಮ ತಂತ್ರಿಗಳಿಗೆ ಅನ್ವಯವಾಗುವುದಿಲ್ಲ. ತಂತ್ರಿ ಹುದ್ದೆಯು ಗೌರವ ಹುದ್ದೆಯಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಅನ್ವಯ ಅನುಮೋದಿತ ಸರಕಾರಿ ನೌಕರನ ಹುದ್ದೆಯಾಗಿರುವುದಿಲ್ಲ.
ನಾನು ಆಗಮ ಶಾಸ್ತ್ರದ ಅನ್ವಯ ದೇವಾಲಯದ ಪೂಜೆ -ಪುರಸ್ಕಾರಗಳನ್ನು, ವಿಶೇಷ ಉತ್ಸವಗಳನ್ನು ನಡೆಸಿಕೊಂಡು ಬಂದಿದ್ದೇನೆ. ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಕಾನೂನು ಅನ್ವಯ ದೇವಾಲಯದ ತಂತ್ರಿಗಳು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಬಾರದು ಎಂದು ಹೇಳಿರುವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮವೂ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದು ಪ್ರಜಾಪ್ರಭುತ್ವದ ಹಕ್ಕು. ಇದರಿಂದ ದೇವಸ್ಥಾನದ ಸಂಪ್ರದಾಯ, ಆಚಾರ -ವಿಚಾರಗಳಿಗೆ ವಿರುದ್ಧವಾಗಿರುವುದಿಲ್ಲ.
ತಂತ್ರಿ ಹುದ್ದೆಯ ಕರ್ತವ್ಯದಿಂದ ನನ್ನನ್ನು ಬಿಡುಗಡೆಗೊಳಿಸಲು ಕಾನೂನಿನ ಅನ್ವಯ ಅಥವಾ ಸಂಪ್ರದಾಯದಂತೆ ಕಾರ್ಯನಿರ್ವಹಣಾಧಿಕಾರಿಗೆ ಹಕ್ಕು ಅಥವಾ ಅಧಿಕಾರ ಇರುವುದಿಲ್ಲ. ಕಾನೂನು ಬಾಹಿರ ನೊಟಿಸನ್ನು ಹಿಂತೆಗೆದುಕೊಂಡು ಶ್ರದ್ಧೆ ಮತ್ತು ಭಕ್ತಿಯಿಂದ ದೇವಾಲಯದ ಧಾರ್ಮಿಕ ಕಾರ್ಯಗಳನ್ನು ಹಲವು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿರುವ ನನಗೆ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇನೆ ಎಂದು ಅವರು ನೊಟೀಸಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.







