ಸರಣಿ ಕಳ್ಳತನ ಆರೋಪಿ ತಂಗರಾಜು ಕಸ್ಟಡಿ ವಿಸ್ತರಣೆಗೆ ಪೊಲೀಸ್ ಅರ್ಜಿ
ಪುತ್ತೂರು, ಮೇ 26: ನಗರದ 7 ಮನೆಗಳಲ್ಲಿ ಬೀಗ ಮುರಿದು ನಗ-ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರಿಂದ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಕುಖ್ಯಾತ ಕಳ್ಳ ತಂಗರಾಜುವಿನ ಪೊಲೀಸ್ ಕಸ್ಟಡಿ ಅವಧಿ ಮೇ 28 ಕ್ಕೆ ಮುಕ್ತಾಯಗೊಳ್ಳಲಿದ್ದು, ಈತನ ತನಿಖೆ ಮುಗಿಯದಿರುವ ಕಾರಣ ಮತ್ತೆ 8 ದಿನಗಳಿಗೆ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆ ಪುತ್ತೂರು ನ್ಯಾಯಾಲಯಕ್ಕೆ ನಗರ ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆ.
ತಂಗರಾಜು ಕಳವು ಮಾಡಿದ ಚಿನ್ನಾಭರಣಗಳನ್ನು ಮಂಗಳೂರು, ಕೇರಳ ಮತ್ತು ತಮಿಳುನಾಡುಗಳ ಚಿನ್ನಾಭರಣಗಳ ಅಂಗಡಿಗೆ ಮಾರಾಟ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಹೇಳಿಕೆ ನೀಡಿರುತ್ತಾನೆ. ಈತ ಕಳವು ಮಾಡಿದ ಸೊತ್ತುಗಳ ಪ್ರಮಾಣ ಅಗಾಧವಾಗಿರುವುದರಿಂದ 8 ದಿನಗಳ ಅವಧಿಯಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈತನ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ತಾನು ಕಳವು ಮಾಡಿದ ಸೊತ್ತುಗಳನ್ನು ಒಂದೇ ಕಡೆ ಮಾರಾಟ ಮಾಡದೆ ಬೇರೆ ಬೇರೆ ಕಡೆ ಮಾರಾಟ ಮಾಡಿರುವುದರಿಂದ ಅವುಗಳನ್ನು ವಶಪಡಿಸಿಕೊಳ್ಳುವುದು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.
ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪುತ್ತೂರು ನಗರ ಸಬ್ ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್ ಹಾಗೂ ಸಿಬಂದಿ ತನಿಖಾ ಕಾರ್ಯದಲ್ಲಿ ತೊಡಗಿದ್ದಾರೆ.





