‘ದಾರಿ ತಪ್ಪಿದ ಮಗ’ 50 ವರ್ಷಗಳ ಬಳಿಕ ಒಡಹುಟ್ಟಿದವರನ್ನು ಕೂಡಿದರು

ದುಬೈ, ಮೇ 26: ಸುಮಾರು 50 ವರ್ಷಗಳ ಹಿಂದೆ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋಗಿದ್ದ 76 ವರ್ಷದ ವ್ಯಕ್ತಿಯೊಬ್ಬರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ತನ್ನ ಸಹೋದರ ಮತ್ತು ಸಹೋದರಿಯನ್ನು ಭೇಟಿಯಾಗಿದ್ದಾರೆ.
ಈಗ ಪಾಕಿಸ್ತಾನದ ಪ್ರಜೆಯಾಗಿರುವ ಹಂಝ ಸರ್ಕಾರ್ ಕೇರಳ ನಿವಾಸಿಗಳಾದ ತನ್ನ ಸಹೋದರ ಟಿ.ಪಿ. ಮಮ್ಮಿಕುಟ್ಟಿ (75) ಮತ್ತು ಅಕ್ಕ ಎಯ್ಯತು (85)ರನ್ನು ಸೇರಿದ್ದಾರೆ.
ಭಾವನಾತ್ಮಕ ಕೂಡುವಿಕೆಗಾಗಿ ಹಂಝ ಕರಾಚಿಯಿಂದ ಅಬುಧಾಬಿಗೆ ಬಂದರೆ, ಮಮ್ಮಿಕುಟ್ಟಿ ಮತ್ತು ಎಯ್ಯತು ಕೇರಳದಿಂದ ಬಂದರು.
ಸರ್ಕಾರ್ 11 ವರ್ಷದವರಾಗಿದ್ದಾಗ 1951ರಲ್ಲಿ ಮೊದಲ ಬಾರಿಗೆ ಕಾಣೆಯಾಗಿದ್ದರು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.
‘‘ಅವರಿಗೆ ಪ್ರಯಾಣದ ಹುಚ್ಚು ಇತ್ತು. ಒಂದು ದಿನ ದನಕರುಗಳನ್ನು ಮೇಯಿಸಿಕೊಂಡು ಬರುವಂತೆ ನಮ್ಮ ಅಮ್ಮ ಅವನನ್ನು ಹೊರಗೆ ಕಳುಹಿಸಿದರು. ಬಳಿಕ ಅವರು ಹಿಂದಿರುಗಲಿಲ್ಲ’’ ಎಂದು ಮಮ್ಮಿಕುಟ್ಟಿ ಹೇಳಿದರು.
ಹಾಗೆ ಹೊರಗೆ ಹೋದ ಸರ್ಕಾರ್ ಕೋಲ್ಕತಕ್ಕೆ ಹೋಗುವ ರೈಲನ್ನು ಏರಿದರು.
‘‘ಕೋಲ್ಕತದಿಂದ ನಾನು ಬಾಂಗ್ಲಾದೇಶಕ್ಕೆ ಹೋದೆ. ಅದು ಆಗ ಪಾಕಿಸ್ತಾನದ ಭಾಗವಾಗಿತ್ತು. ಬಳಿಕ ನಾನು ಕರಾಚಿಗೆ ಹೋದೆ’’ ಎಂದು ಸರ್ಕಾರ್ ಹೇಳುತ್ತಾರೆ.
18 ವರ್ಷಗಳ ಬಳಿಕ, 1968ರಲ್ಲಿ ಅವರು ಮನೆಗೆ ವಾಪಸಾದರು.
‘‘ನಾನು ಜೀವವನ್ನು ಪಣವಾಗಿಟ್ಟುಕೊಂಡು ರಾಜಸ್ಥಾನದ ಸಮೀಪ ಗಡಿಗಳಲ್ಲಿ ನುಸುಳಿದೆ. ಮೂರು ವಾರಗಳ ಕಾಲ ನಡೆದ ನಾನು ಅಂತಿಮವಾಗಿ ಹೈದರಾಬಾದ್‌ಗೆ ಹೋಗುವ ಬಸ್ಸನ್ನು ಏರಿದೆ. ನಾನು ನನ್ನ ತಾಯಿಗೆ ಕಾಗದ ಬರೆದ ಬಳಿಕ ಅವರು ಕೇರಳಕ್ಕೆ ಹೋಗುವ ರೈಲು ಟಿಕೆಟ್‌ನ ಹಣವನ್ನು ಕಳುಹಿಸಿದರು’’ ಎಂದು ಸರ್ಕಾರ್ ಹೇಳಿದರು.
ಊರಿನಲ್ಲಿ ನೆಲೆಸುತ್ತಾರೆ ಎಂಬ ನಿರೀಕ್ಷೆಯಿಂದ ಕುಟುಂಬವು ಹಂಝ ಸರ್ಕಾರ್‌ಗೆ ಕಿರಾಣಿ ಅಂಗಡಿಯೊಂದನ್ನು ಹಾಕಿಕೊಟ್ಟಿತು. ಆದರೆ, ಒಂಬತ್ತು ತಿಂಗಳ ಬಳಿಕ ಅಂಗಡಿಗೆ ಸಾಮಾನುಗಳನ್ನು ತರುವ ನೆವದಿಂದ ಹೊರಟ ಹಂಝ ಮತ್ತೆಂದೂ ಹಿಂದಿರುಗಲಿಲ್ಲ.
‘‘ಅಂದೇ ನಾವು ಅವನನ್ನು ಕೊನೆಯ ಬಾರಿ ನೋಡಿದ್ದು. ಅವನ ಚಿತ್ರವನ್ನು ತನ್ನ ದಿಂಬಿನಡಿ ಇಟ್ಟು ರಾತ್ರಿಯಿಡೀ ತಾಯಿ ಅಳುತ್ತಿದ್ದ ದೃಶ್ಯ ನನಗಿನ್ನೂ ನೆನಪಿದೆ’’ ಎಂದು ಎಯ್ಯತು ಹೇಳಿದರು.
48 ವರ್ಷಗಳ ಬಳಿಕ, ಹಂಝರ ಕುಟುಂಬ ಅವರು ಕರಾಚಿಯಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಿತು. ಹಂಝರ ಮಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಆಸಿಯಾ ಮತ್ತು ಮಮ್ಮಿಕುಟ್ಟಿಯ ಅಬುಧಾಬಿಯಲ್ಲಿರುವ ಮೊಮ್ಮಗ ನಾದಿರ್‌ಶಾ ಫೇಸ್‌ಬುಕ್‌ನಲ್ಲಿ ಪರಿಚಯವಾದ ಬಳಿಕ ಇದು ಸಂಭವಿಸಿತು.
‘‘ನನ್ನ ಸಹೋದರ ಮತ್ತು ಸಹೋದರಿಯನ್ನು ನನ್ನ ಜೀವಮಾನದಲ್ಲಿ ಮತ್ತೆ ನೋಡುತ್ತೇನೆಂದು ನಾನು ಭಾವಿಸಿರಲಿಲ್ಲ. ಈ ಕ್ಷಣಕ್ಕಾಗಿ ನಾನು ತುಂಬಾ ಸಮಯದಿಂದ ಕಾಯುತ್ತಿದ್ದೆ. ಈಗ ಅವರನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಲು ನನಗಿಷ್ಟವಿಲ್ಲ’’ ಎಂದು ಸರ್ಕಾರ್ ಹೇಳುತ್ತಾರೆ.







