ಪುತ್ತೂರು: ಕೇಂದ್ರ ಸರಕಾರದ ಸಾಧನೆ ಕುರಿತು ವಿಶೇಷ ಕಾರ್ಯಕ್ರಮ

ಪುತ್ತೂರು, ಮೇ 26: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಗಳನ್ನು ಭಾರತ ಒಪ್ಪಿದೆ, ವಿದೇಶಗಳು ಹೊಗಳಿವೆ. ಅವರು ರಾಷ್ಟ್ರದ ದೃಷ್ಠಾರವಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ‘ಕೇಂದ್ರ ಸರಕಾರದ ಎರಡು ವರ್ಷದ ಸಾಧನೆಗಳ ಕುರಿತು ವಿಶೇಷ ಕಾರ್ಯಕ್ರಮವನ್ನು ಗುರುವಾರ ಪುತ್ತೂರು ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯತ್ ಕಾಲದ ಕತ್ತಲನ್ನು ಬೆಳಕು ಮಾಡುವ ಕೆಲಸವನ್ನು ಮೋದಿ ಅವರು ಮಾಡಿದ್ದರೆ. ಲೋಕಸಭೆ ಶ್ರೇಷ್ಠ ಎಂಬ ಜಾಣ್ಮೆಯನ್ನು ಮೆರೆದಿರುವ ಪ್ರಧಾನಿಗಳು ಎಲ್ಲಾ ದೇಶಗಳಲ್ಲಿಯೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದ್ದು, ಜಗತ್ತು ಭಾರತದತ್ತ ನೋಡುವಂತೆ ಮಾಡಿದ್ದಾರೆ. ಜಗತ್ತಿನೆಲ್ಲೆಡೆ ಸಾಮರಸ್ಯ ಸೌಹಾರ್ದತೆಯ ಕೊಂಡಿ ಬೆಸೆದಿದ್ದಾರೆ ಎಂದರು. ಆಧ್ಯಾತ್ಮಿಕ ಸಂದೇಶದಲ್ಲಿ ಮೋದಿಯವರ ಕೊಡುಗೆ ಅಪಾರವಾಗಿದ್ದು, 150 ದೇಶಗಳಲ್ಲಿ ಯೋಗವನ್ನು ಮಾಡುವಂತೆ ಪ್ರೇರಣೆ ನೀಡಿದ್ದಾರೆ. ಅಮೇರಿಕದ ಅಧ್ಯಕ್ಷ ಒಬಾಮ ಸೇರಿದಂತೆ ಪ್ರಪಂಚದ ಬಹುತೇಕರು ಮೋದಿ ಸಂದೇಶಕ್ಕೆ ಮನ್ನಣೆ ನೀಡಿದ್ದಾರೆ. ದೇಶದ ಗಡಿರೇಖೆಯನ್ನು ಸುದೃಢಗೊಳಿಸಿರುವ ಪ್ರಧಾನಿ ಆಂತರಿಕ ಭದ್ರತೆಗೆ ಮಹತ್ವ ನೀಡಿದ್ದಾರೆ ಎಂದರು.
ಆದರ್ಶ ಗ್ರಾಮಗಳ ಪರಿಕಲ್ಪನೆಯಿಂದ ಗ್ರಾಮ ಪಂಚಾಯತ್‌ಗಳಿಗೆ ಅನುದಾನ, ಸ್ವಚ್ಛ ಗ್ರಾಮದ ಪರಿಕಲ್ಪನೆಯಿಂದ 18 ಸಾವಿರ ಗ್ರಾಮಗಳಿಗೆ ಶೌಚಾಲಯ ನಿರ್ಮಾಣ, 18 ಸಾವಿರ ಗ್ರಾಮಗಳನ್ನು ಕತ್ತಲೆಮುಕ್ತ ಗ್ರಾಮ ಗುರಿ ಹೊಂದಿ 9 ಸಾವಿರ ಗ್ರಾಮಗಳನ್ನು ಕತ್ತಲೆಮುಕ್ತ ಮಾಡಿರುವುದು. ಅಂಚೆಕಚೇರಿಗಳನ್ನು ಬ್ಯಾಂಕ್‌ಗಳನ್ನಾಗಿ ಹಾಗೂ ಬಾನುಲಿಗಳಲ್ಲಿ ಮನ್ ಕಿ ಬಾತ್ ಮಾಡುವ ಮೂಲಕ ಅವುಗಳಿಗೆ ಮರುಜೀವ ನೀಡಿರುವುದು. ದ.ಕ. ಜಿಲ್ಲೆ ಸೇರಿದಂತೆ ಸಾವಿರಾರು ನಗರಗಳನ್ನು ಸ್ಮಾರ್ಟ್ ಸಿಟಿ ಮಾಡಿ ಅಭಿವೃದ್ಧಿ ಪಡಿಸಿರುವುದು. ರಾಜ್ಯದ ಎಲ್ಲಾ ರಸ್ತೆಗಳನ್ನು ಚತುಷ್ಪಥಗೊಳಿಸಿ ಮೇಲ್ದರ್ಜೆಗೇರಿಸಿರುವುದು, ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮೂಡಿಸಿರುವುದು. ಜನಧನ್ ಯೋಜನೆಯ ಮೂಲಕ ಬಡ ಮಹಿಳೆಯರಿಗೆ ಸ್ವಾಭಿಮಾನ ಮೂಡಿಸಿರುವುದು. ಬಿಪಿಎಲ್ ಕಾರ್ಡುದಾರರಿಗೆ ಗ್ಯಾಸ್ ನೀಡಿ ಅವರ ಕಣ್ಣೀರು ಒರೆಸಿರುವುದು. ಕೃಷಿ ಇಲಾಖೆಯಲ್ಲಿ ಕ್ರಾಂತಿ ನಡೆಸಿರುವುದು, 30ಶೇ. ಕೃಷಿ ನಾಶವಾದಲ್ಲಿ ರೈತರಿಗೆ ಪೂರ್ಣ ಪರಿಹಾರ ನೀಡುವಂತೆ ಮಾಡಿರುವುದು ಸೇರಿದಂತೆ ಯುವಕ, ಯುವತಿಯರಿಗೆ, ಕಾರ್ಮಿಕ ವರ್ಗಕ್ಕೆ, ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳನ್ನು ಒದಗಿಸಿರುವುದು ಪ್ರಧಾನಿ ಸಾಧನೆಯಾಗಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಸಿ. ರವಿಚಂದ್ರ, ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಂಯೋಜಕಿ ಮಂಜುಳ ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರ ಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ನಗರಸಭಾ ಆಯುಕ್ತೆ ರೇಖಾ ಜೆ.ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಧರ್ಣಪ್ಪಮೂಲ್ಯ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಎಂ. ನಾಗೇಂದ್ರ ಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ನಿರ್ದೇಶಕ ಕೆ.ಪಿ. ರಾಜೀವನ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಜಾಗೃತಿ ಜಾಥಾ ನಡೆಯಿತು. ಆ ಬಳಿಕ ಕೇಂದ್ರ ಸರಕಾರದ ಯೋಜನೆಯ ಬಗ್ಗೆ ಯಕ್ಷಗಾನ ಬಯಲಾಟ ನಡೆಯಿತು.
ಬಿಜೆಪಿ ಬಿಂಬಿತವಾದ ಕಾರಣ ಕಾರ್ಯಕ್ರಮಕ್ಕೆ ಹೋಗಿಲ್ಲ: ಶಾಸಕಿ
ಕೇಂದ್ರ ಸರಕಾರದ ಸಾಧನೆಯನ್ನು ಸರಕಾರಿ ಇಲಾಖೆಗಳು ಮಾಡುವುದು ತಪ್ಪಲ್ಲ. ಆದರೆ ಈ ಕಾರ್ಯಕ್ರಮವನ್ನು ಬಿಜೆಪಿ ಬಿಂಬಿತವಾಗಿ ಮಾಡಲಾಗಿದೆ. ಪತ್ರಿಕೆಯಲ್ಲಿ ಬಿಜೆಪಿಯ ಚಿಹ್ನೆ ಬಳಸಿ ಜಾಹೀರಾತು ನೀಡಿದ್ದಾರೆ. ಇದು ಸರಿಯಲ್ಲ. ಮೋದಿಯ ಫೋಟೊ ಹಾಕುವುದು ಸರಿ ಆದರೆ ಬಿಜೆಪಿಯ ಚಿಹ್ನೆ ಬಳಸುವುದು ತಪ್ಪು. ಅದಕ್ಕಾಗಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅದು ಪಕ್ಷದ ಕಾರ್ಯಕ್ರಮವಲ್ಲ, ಸರಕಾರಿ ಕಾರ್ಯಕ್ರಮಗಳಲ್ಲಿ ಇಂತಹ ರಾಜಕೀಯ ಮಾಡುವುದನ್ನು ಇನ್ನಾದರೂ ಬಿಜೆಪಿಯವರು ನಿಲ್ಲಿಸಲಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಪ್ರೇರಿತ ಕಾರ್ಯಕ್ರಮ: ನಗರ ಸಭಾ ಅಧ್ಯಕ್ಷೆ
ಇದೊಂದು ಬಿಜೆಪಿಯವರ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದೆ. ನನ್ನಲ್ಲಿ ಕೇಳದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿದ್ದಾರೆ. ಬಿಜೆಪಿ ಪಕ್ಷದ ಅಡಿಯಲ್ಲಿ ನಡೆದಿರುವ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿಲ್ಲ ಎಂದು ನಗರ ಸಭಾಧ್ಯಕ್ಷೆ ಜಯಂತಿ ಬಲ್ನಾಡು ಪ್ರತಿಕ್ರಿಯೆ ನೀಡಿದ್ದಾರೆ.







