ಎನ್‌ಡಿಎ ಸರಕಾರದ ಎರಡನೇ ವರ್ಷಾಚರಣೆ: ಅದರ ‘ಸಾಧನೆಗಳನ್ನು’ ಕೊಂಡಾಡಿದ ಬಿಜೆಪಿ

ಹೊಸದಿಲ್ಲಿ,ಮೇ 26: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಅಮಿತ ಶಾ ಅವರ ನೇತೃತ್ವದಲ್ಲಿ ಹಿರಿಯ ಬಿಜೆಪಿ ನಾಯಕರು ಗುರುವಾರ ಇಲ್ಲಿ ವಿವಿಧ ಮಾಧ್ಯಮಗಳ ಹಿರಿಯ ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸರಕಾರದ ಸಾಧನೆಗಳ ಬಗ್ಗೆ ಪ್ರಮುಖವಾಗಿ ಹೇಳಿಕೊಂಡರು. ಬಡವರ ಸಬಲೀಕರಣ,ಮೂಲಸೌಕರ್ಯ ಬೆಳವಣಿಗೆ ಇತ್ಯಾದಿಗಳು ಈ ಸಾಧನೆಗಳಲ್ಲಿ ಸೇರಿವೆ ಎಂದರು.
ಶಾ ಅವರೊಂದಿಗೆ ವಿತ್ತಸಚಿವ ಅರುಣ್ ಜೇಟ್ಲಿ,ರೈಲ್ವೆ ಸಚಿವ ಸುರೇಶ ಪ್ರಭು,ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಮತ್ತು ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಸೇರಿದಂತೆ ಸರಕಾರದ ಉನ್ನತ ನಾಯಕರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕಾರದ ಸಾಧನೆಗಳನ್ನು ಪ್ರಮುಖವಾಗಿ ನಿರೂಪಿಸಿದರು.
‘ಕಡಿಮೆ ಹಣದುಬ್ಬರ’ ಮತ್ತು ‘ಸ್ಥಿರವಾದ ಬೆಲೆ’ಗಳಿಂದಾಗಿ ಶ್ರೀಸಾಮಾನ್ಯನಿಗೆ ಲಾಭವಾಗಿದೆ ಮತ್ತು ಶೇ.7.6 ರಷ್ಟು ಹೆಚ್ಚಿನ ಪ್ರಗತಿ ದರದೊಂದಿಗೆ ಭಾರತವು ವಿಶ್ವದಲ್ಲಿ ‘ಉಜ್ವಲ ತಾಣ’ವಾಗಿ ಹೊರಹೊಮ್ಮಿದೆ ಎಂದು ಅವರು ಪ್ರತಿಪಾದಿಸಿದರು.
ದೇಶವು ಪರಿವರ್ತನೆಯ ದಾರಿಯಲ್ಲಿದೆ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ ಎಂದೂ ಬಿಜೆಪಿ ಪ್ರತಿಪಾದಿಸಿತು.
ಭಾರತವು ಉಜ್ವಲ ಹೂಡಿಕೆ ತಾಣವೆಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯು ಬಣ್ಣಿಸಿದೆ. ದೇಶದಲ್ಲಿ ಅತ್ಯಂತ ಹೆಚ್ಚಿನ ವಿದೇಶಿ ನೇರ ಹೂಡಿಕೆಯು ಹರಿದು ಬಂದಿದ್ದು,ವಿಮಾಕ್ಷೇತ್ರವೊಂದರಲ್ಲೇ 9,000 ಕೋ.ರೂ.ವಿದೇಶಿ ಹೂಡಿಕೆಯಾಗಿದೆ ಎಂದು ಅದು ಹೇಳಿತು.
ಜೊತೆಗೆ ಸರಕಾರವು ಬಡವರ ಸಬಲೀಕರಣಕ್ಕಾಗಿ ಪ್ರಧಾನ ಮತ್ರಿ ಆವಾಸ್ ಯೋಜನೆ,ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ದೀನದಯಾಳ ಉಪಾಧ್ಯಾಯ ಅಂತ್ಯೋದಯ ಯೋಜನೆಯಂತಹ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ ಸೀತಾರಾಮನ್,ಬಡವರಿಗೆ ಕೈಗೆಟಕುವ ಪ್ರೀಮಿಯಂ ದರಗಳಲ್ಲಿ ವಿಮೆ ರಕ್ಷಣೆಯನ್ನು ಒದಗಿಸುವ ಹಲವಾರು ಇತರ ಸಾಮಾಜಿಕ ಸುರಕ್ಷಾ ಯೋಜನೆಗಳನ್ನೂ ಪ್ರಕಟಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ 1.37 ಲಕ್ಷ ಕೋಟಿ ರೂ.ಗಳ ಜಾಮೀನುರಹಿತ ಸಾಲಗಳನ್ನು ಒದಗಿಸುವ ಮೂಲಕ 3.48 ಲಕ್ಷ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ನೇರ ನಗದು ವರ್ಗಾವಣೆ ಯೋಜನೆಯು ಸೋರಿಕೆಯನ್ನು ನಿವಾರಿಸುವ ಮೂಲಕ ಬಡಜನತೆಗೆ ಲಾಭದಾಯಕವಾಗಿದೆ ಎಂದು ಬಿಜೆಪಿ ವಿವರಿಸಿತು.
ಮೂಲಸೌಕರ್ಯ ಅಭಿವೃದ್ಧಿ ಕುರಿತಂತೆ,2015-16ರಲ್ಲಿ 6,029 ಕಿ.ಮೀ.ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಮತ್ತು 7,108 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಭಾರತವು ವಿಶ್ವದ ಸ್ವಚ್ಛ ಶಕ್ತಿ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಎನ್‌ಡಿಎ ಸಾಧನೆಗಳ ವರದಿಯು ಹೇಳಿದೆ.
ರೈತರಿಗೆ ನೆರವಾಗಲು ಕೃಷಿ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಮತ್ತು ಪ್ರಧಾನ ಮಂತ್ರಿ ಬೆಳೆ ವಿಮೆಯಂತಹ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಪ್ಪುಹಣವನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯುವಜನತೆಗೆ ಉದ್ಯೋಗಾವಕಾಶಗಳಿಗೆ ಒತ್ತು ನೀಡಲು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ 19.55 ಲಕ್ಷ ಜನರಿಗೆ ತರಬೇತಿಯನ್ನು ನೀಡಲಾಗಿದೆ ಎಂದೂ ಬಿಜೆಪಿ ನಾಯಕರು ಹೇಳಿದರು.
ಮೋದಿ ಆಡಳಿತ ಅತ್ಯಂತ ನಿರಾಶಾದಾಯಕ:ಕಾಂಗ್ರೆಸ್
ಸ್ವಾತಂತ್ರಾ ನಂತರದ ಯಾವುದೇ ಸರಕಾರಕ್ಕೆ ಹೋಲಿಸಿದರೂ ಎರಡು ವರ್ಷಗಳ ಮೋದಿ ಆಡಳಿತದ ಸಾಧನೆ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಗುರುವಾರ ಇಲ್ಲಿ ಬಣ್ಣಿಸಿದ ಕಾಂಗ್ರೆಸ್,ದೇಶದ ಪಾಲಿಗೆ ಸಂಭ್ರಮ ಆಚರಿಸುವಂಥದ್ದೇನಿಲ್ಲ ಎಂದು ಹೇಳಿತು.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಹಿರಿಯ ನಾಯಕರ ಗಡಣವೇ ಭಾಗಿಯಾಗಿದ್ದು ಆರ್ಥಿಕತೆ,ಉದ್ಯೋಗದಿಂದ ವಿದೇಶ ನೀತಿಯವರೆಗೆ ಹತ್ತು ಹಲವು ವಿಷಯಗಳಲ್ಲಿ ಕೇಂದ್ರವನ್ನು ತರಾಟೆಗೆತ್ತಿಕೊಂಡಿತು.
ದೇಶದಲ್ಲಿ ಯಾವುದೇ ಸರ್ವಾಂಗೀಣ ಅಭಿವೃದ್ಧಿಯಾಗಿಲ್ಲ,ಹೀಗಾಗಿ ಮೋದಿಯವರ ಸಂಭ್ರಮಾಚರಣೆಗೆ ಅರ್ಥವಿಲ್ಲ. ಎರಡು ವರ್ಷಗಳು ಪೊಳ್ಳು ಭರವಸೆಗಳಲ್ಲಿಯೇ ಕಳೆದುಹೋಗಿವೆ ಎಂದು ಪಕ್ಷದ ವಕ್ತಾರ ಕಪಿಲ ಸಿಬಲ್ ಹೇಳಿದರು.
ಯುಪಿಎ ಆಡಳಿತದೊಂದಿಗೆ ಹೋಲಿಸಿದರೆ ಮೋದಿ ಸರಕಾರದ ಸಾಧನೆ ಏನೂ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಎನ್‌ಡಿಎ ಸರಕಾರವು ಕೇವಲ ಜಾಹೀರಾತುಗಳ ಬಲದಲ್ಲಿ ಬದುಕುಳಿದಿದೆ ಎಂದ ಪಕ್ಷವು,ಚರ್ಚೆಗೆ ಬರುವಂತೆ ಅದಕ್ಕೆ ಸವಾಲನ್ನೂ ಒಡ್ಡಿತು.
‘ಪ್ರಗತಿ ಕಿ ಥಮ್ ಗಯಿ ಚಾಲ್,ದೋ ಸಾಲ್,ದೇಶ್ ಕಾ ಬುರಾ ಹಾಲ್(ಪ್ರಗತಿಯು ಸ್ಥಗಿತಗೊಂಡಿದೆ,ಎರಡು ವರ್ಷಗಳಲ್ಲಿ ದೇಶ ದುರವಸ್ಥೆಯಲ್ಲಿದೆ) ಎಂಬ ಕಿರುಚಿತ್ರವನ್ನೂ ಏಐಸಿಸಿ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿತು.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್,ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಏಐಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಣದೀಪ ಸುರ್ಜೆವಾಲಾ ಸರಕಾರದ ವಿರುದ್ಧ ದಾಳಿಯಲ್ಲಿ ಪಾಲ್ಗೊಂಡಿದ್ದರು.







