ಬೆಳ್ತಂಗಡಿ ತಾಲೂಕು ಕಚೇರಿಗೆ ಡಿಸಿ ಭೇಟಿ: ಸಾರ್ವಜನಿಕರ ಮನವಿ ಸ್ವೀಕಾರ

ಬೆಳ್ತಂಗಡಿ, ಮೇ 26: ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ಆಗಮಿಸಿ ಸಾರ್ವಜನಿಕರ ಸಮಸ್ಯೆಗಳ ಮನವಿಗಳನ್ನು ಸ್ವೀಕರಿಸಿದರು. ಸಮಸ್ಯೆಗಳನ್ನು ವಾರದೊಳಗೆ ಪರಿಹರಿಸಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಮಿತ್ತಬಾಗಿಲು ಗ್ರಾಮ ಕಿಲ್ಲೂರು ಬಸ್‌ನಿಲ್ದಾಣದ ಬಳಿ ಲೋಕೋಪಯೋಗಿ ರಸ್ತೆ ಮಾರ್ಜಿನ್‌ನಲ್ಲಿ ಸರಕಾರಿ ಜಮೀನನ್ನು ಅತಿಕ್ರಮಿಸಿಕೊಂಡು ಸ್ಥಳೀಯ ಭೂ ಮಾಲಕ ವಾಸುದೇವ ಸೇಮಿತ ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ತಹಶಿಲ್ದಾರರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ತಹಶಿಲ್ದಾರ್ ಮತ್ತು ಕಂದಾಯ ನಿರೀಕ್ಷಕರ ನಿರ್ಲಕ್ಷ ಕಂಡು ಡಿಸಿಯವರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಅತಿಕ್ರಮಣ ಮಾಡಿದವರ ಮೇಲೆ ಸರಕಾರಿ ಜಾಗವನ್ನು ಕಬಳಿಸಿರುವ ಬಗ್ಗೆ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದರು.
ತೋಟತ್ತಾಡಿ ಗ್ರಾಮದ ಸಂಜೀವ ಪೂಜಾರಿ ಎಂಬುವರಿಗೆ ಅಕ್ರಮ ಸಕ್ರಮದಡಿಯಲ್ಲಿ 290/91-92ರಂತೆ 2014ರಲ್ಲಿ 95ಸೆಂಟ್ಸ್ ಜಾಗ ಮಂಜೂರಾಗಿದ್ದು ಈ ಬಗ್ಗೆ ಜಮೀನಿನ ಡಿ ನೋಟಿಸ್, ನಕ್ಷೆ, ನಡಾವಳಿಗಳನ್ನು ಕೋರಿ ಮಾ.14 ರಂದು ಅವರ ಅಳಿಯ ಸತೀಶ್ ಅರ್ಜಿ ನೀಡಿದ್ದರು. ಆದರೆ ಇಷ್ಟು ದಿನಗಳು ಕಳೆದರೂ ಈ ಜಮೀನಿನ ಕಡತವು ನಾಪತ್ತೆಯಾಗಿದ್ದು ಆ ಸಂದರ್ಭದಲ್ಲಿ ಶಿವಲಾಲ್ ಎಂಬುವರು ಕೇಸ್ ವರ್ಕರ್ ಆಗಿದ್ದರು. ಪ್ರಸ್ತುತ ಅವರು ಬೆಳಗಾವಿಗೆ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಕಡತವನ್ನು ಒದಗಿಸಿ ನ್ಯಾಯ ನೀಡುವಂತೆ ಸತೀಶ್ ಮನವಿ ಮಾಡಿದರು. ಡಿಸಿ ಅವರು ಒಂದೂವರೆ ವರ್ಷದ ಹಿಂದಿನ ಕಡತ ಇಲ್ಲದಿರುವುದು ಹೇಗೆ?. ಕಳೆದ ತಿಂಗಳು ಬಂದಾಗ ಇದೇ ವಿಚಾರಕ್ಕೆ ಪರಿಹಾರ ಕಾಣುವಂತೆ ಸೂಚಿಸಿದ್ದೆ. ಇನ್ನೂ ಕಡತ ಸಿಗಲಿಲ್ಲವೇ ಎಂದು ತಹಶೀಲ್ದಾರ್‌ಗೆ ಪ್ರಶ್ನಿಸಿದರು. ಶಿವಲಾಲ್ ಮೇಲೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿ ಎಂದು ಆದೇಶಿಸಿ ಕಡತವನ್ನು ಪತ್ತೆ ಹಚ್ಚುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ತೆಕ್ಕಾರು ಗ್ರಾಮದ ಮರಮ ಒಂದಾಯಿ ಸಾರ್ವಜನಿಕ ರಸ್ತೆ 40 ಲಿಂಕ್ಸ್ ಇದ್ದದ್ದು ಇದೀಗ 10 ಲಿಂಕ್ಸ್ ಮಾತ್ರ ಅಗಲದ ಕಾಲುದಾರಿಯಾಗಿ ಪಹಣಿಯಲ್ಲಿ ನಮೂದಾಗಿದೆ. ಈ ರಸ್ತೆಗೆ ಡಾಮರೀಕರಣಕ್ಕೆ 9 ಲಕ್ಷ ರೂ. ಮಂಜೂಗಿದೆ. ಆದರೆ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ನವೀನ್ ರೈ ಬಾರ್ಯ ಹಾಗು ಗ್ರಾಮಸ್ಥರು ಡಿಸಿಯವರ ಗಮನಕ್ಕೆ ತಂದರು. ಈ ರಸ್ತೆಯು ಪಹಣಿಯಲ್ಲಿ ಮೂಲವಾಗಿ ಹೇಗಿದೆಯೋ ಅದೇ ರೀತಿ ನಮೂದಿಸುವಂತೆ ಎಸಿಯವರಿಗೆ ಪ್ರಸ್ತಾವನೆ ಕಳುಹಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಪಿಲಿಚಾಮುಂಡಿಕಲ್ಲು ಹಿ.ಪ್ರಾ.ಶಾಲೆಯ ಪಹಣಿ ಪತ್ರದಲ್ಲಿ ಶಾಲೆಯ ಹೆಸರನ್ನು ಕುವೆಟ್ಟು ಶಾಲೆ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದನ್ನು ಸರಿಪಡಿಸುವಂತೆ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬರಲಾಗಿದೆ. ಇದುವರೆಗೆ ಯಾವುದೇ ಪರಿಣಾಮವಾಗಿಲ್ಲ ಎಂದು ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಡಿಸಿಯವರ ಗಮನಕ್ಕೆ ತಂದರು. ಡಿಸಿಯವರು ಕೂಡಲೇ ತಿದ್ದುಪಡಿ ಮಾಡುವಂತೆ ಎಸಿಯವರಿಗೆ ಆದೇಶಿಸುವುದಾಗಿ ಭರವಸೆ ನೀಡಿದರು.
ಕುತ್ಯಾರು ಬಳಿ ಚರಂಡಿ ಕಾಮಗಾರಿಗೆ ಹಲವು ಬಾರಿ ಅರ್ಜಿ ಕೊಟ್ಟರೂ ನಗರ ಪಂಚಾಯತ್ ಸ್ಪಂದಿಸದಿರುವ ಬಗ್ಗೆ ಅಲ್ಲಿಯ ನಿವಾಸಿಯೊಬ್ಬರು ಡಿಸಿಯವರ ಗಮನಕ್ಕೆ ತಂದರು. ತಕ್ಷಣ ಡಿಸಿಯವರು ನಪಂ ಮುಖ್ಯಾಧಿಕಾರಿಯವರನ್ನು ಕಚೇರಿಗೆ ಕರೆಸಿ ವಿಚಾರಿಸಿದರು. ಕಾಮಗಾರಿಯನ್ನು ಕೂಡಲೇ ನಡೆಸುತ್ತೇನೆ ಎಂದು ಮುಖ್ಯಾಧಿಕಾರಿ ಡಿಸಿಯವರಲ್ಲಿ ತಿಳಿಸಿದರು. ತಹಶೀಲ್ದಾರ್ ಪ್ರಸನ್ನ ಮೂರ್ತಿ, ಕಂದಾಯ ನಿರೀಕ್ಷಕರುಗಳು ಇದ್ದರು.
ನಿವೃತ್ತಿಯಾದವರು ತಾಲೂಕು ಕಚೇರಿಯಲ್ಲಿನ ಕೆಲಸವನ್ನು ನಿರ್ವಹಿಸುತ್ತಿರುವ ನೆಪದಲ್ಲಿ ಠಿಕಾಣಿ ಹೂಡಿ ಹಲವರಿಗೆ ತೊಂದರೆಯಾಗುತ್ತಿರುವ ಬಗ್ಗೆ ಡಿಸಿಯವರ ಗಮನಕ್ಕೆ ತರಲಾಯಿತು. ನಿವೃತ್ತಿಯಾದವರು ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು, ನಿಯಮದಂತೆ ಕಾರ್ಯನಿರ್ವಹಿಸದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿರುವುದನ್ನು ಮನಗಂಡ ಡಿಸಿಯವರು ಇನ್ನು ಮುಂದೆ ಅಂತಹವರು ತಾಲೂಕು ಕಚೇರಿಗೆ ಬರದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು. ನನ್ನ ಸೂಚನೆಯನ್ನು ಮೀರಿ ಯಾರದರೂ ಬರುವಂತೆ ಆದಲ್ಲಿ ಅಂತಹವರ ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿ ಎಂದೂ ಸಾರ್ವಜನಿಕರಿಗೆ ತಿಳಿಸಿದರು







