ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಬಡ್ಡಿರಹಿತ ಶೈಕ್ಷಣಿಕ ಸಾಲ
ವೃತ್ತಿಪರ ಕೋರ್ಸುಗಳಿಗೆ ಸೇರಬಯಸುವ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಮಂಗಳೂರು, ಮೇ 26: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಧಾರ್ಮಿಕ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧಿಸ್ಟ್, ಸಿಖ್ ಮತ್ತು ಪಾರ್ಸಿ) ಸಮುದಾಯಕ್ಕೆ ಸೇರಿರುವ ಸಿ.ಇ.ಟಿ. ಮೂಲಕ ವೃತ್ತಿಪರ ಕೋರ್ಸುಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ವಿದ್ಯಾಭ್ಯಾಸ ಸಾಲವನ್ನು ಅರಿವು ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗುವುದು.
ಎಂಬಿಬಿಎಸ್ ಹಾಗೂ ಇನ್ನಿತರ ವೈದ್ಯಕೀಯ ಕೋರ್ಸುಗಳು, ಬಿಇಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಕೋರ್ಸುಗಳಿಗೆ ಸಿಇಟಿ ಬರೆದ ವಿದ್ಯಾರ್ಥಿಗಳು ಈ ಯೋಜನೆ ಅರ್ಹರಾಗಿರುತ್ತಾರೆ. ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ಸೇರಲಿರುವ ಕೋರ್ಸಿನ ಸಿಇಟಿ ಶುಲ್ಕವನ್ನು ನಿಗಮದಿಂದ ನೇರವಾಗಿ ಕೆಇಎಗೆ ವರ್ಗಾಯಿಸಲಾಗುವುದು. ಆದುದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಶುಲ್ಕಕ್ಕೆ ಸಂಬಂಧಿಸಿ ಪ್ರತ್ಯೇಕ ಡಿಡಿಯನ್ನು ಕೆಇಎಗೆ ನೀಡುವ ಅಗತ್ಯವಿರುವುದಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ಶಿಕ್ಷಣದ ಕನಸನ್ನು ನನಸಾಗಿಸಲು ಇದೊಂದು ಸುವರ್ಣಾವಕಾಶವಾಗಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು.
ಅರ್ಜಿಯೊಂದಿಗೆ ವಿದ್ಯಾರ್ಥಿಯ ನಾಲ್ಕು ಪಾಸ್‌ಪೋರ್ಟ್ ಗಾತ್ರದ ಫೋಟೊಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್/ಆಧಾರ್ ಕಾರ್ಡ್/ಟೆಲಿಫೋನ್/ನೀರು/ಕೆಇಬಿ ಬಿಲ್(ವಿಳಾಸ ದೃಢೀಕರಣಕ್ಕಾಗಿ ಯಾವುದಾದರೂ ಒಂದು), ಸಿಇಟಿ ಅಡ್ಮಿಶನ್ ಆರ್ಡರ್, ಎಸೆಸೆಲ್ಸಿ ಅಂಕಪಟ್ಟಿ, 50 ರೂ.ನ ಇನ್‌ಡೆಮ್ನಿಟಿ ಬಾಂಡ್ ಜೊತೆಗೆ ಹೆತ್ತವರ/ಗಂಡನ/ರಕ್ಷಕರ 2 ಪಾಸ್‌ಪೋರ್ಟ್ ಗಾತ್ರದ ಫೋಟೊಗಳನ್ನು ಲಗತ್ತಿಸಬೇಕು.
ಉಚಿತ ಅರ್ಜಿಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಛೇರಿ, ಉರ್ವಸ್ಟೋರ್ ಮಂಗಳೂರು ಅಥವಾ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು ಇಲ್ಲಿಂದ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.:0824 4267883., ಮೊ.ಸಂ.: 9844773906, 9743715388ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.







