ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾರುಕಟ್ಟೆ ವೌಲ್ಯವಿರುವ 3ನೆ ಆಟಗಾರ ಕೊಹ್ಲಿ
ಸ್ಪರ್ಧೆಯಲ್ಲಿ ಮೆಸ್ಸಿ, ಜೊಕೊವಿಕ್ ಹಿಂದಿಕ್ಕಿದ ಭಾರತದ ಸ್ಟಾರ್ ಕ್ರಿಕೆಟಿಗ

ಹೊಸದಿಲ್ಲಿ, ಮೇ 26: ಭಾರತದ ಟೆಸ್ಟ್ ತಂಡದ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಮಾರುಕಟ್ಟೆ ವೌಲ್ಯ ಇರುವ ವಿಶ್ವದ ಮೂರನೆ ಕ್ರೀಡಾಪಟುವಾಗಿದ್ದಾರೆ. ಈ ಮೂಲಕ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಹಾಗೂ ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಸ್ಪರ್ಧೆಯಲ್ಲಿ ಹಿಂದಕ್ಕೆ ತಳ್ಳಿದ್ದಾರೆ ಎಂದು ನಿಯತಕಾಲಿಕ ‘ಸ್ಪೋರ್ಟ್ಸ್ ಪ್ರೊ’ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.
ಕೊಹ್ಲಿ ಎನ್‌ಬಿಎಯ ‘ಅತ್ಯಂತ ವೌಲ್ಯಯುತ ಆಟಗಾರ ಸ್ಟೀಫನ್ ಕರಿ ಹಾಗೂ ಜುವೆಂಟಸ್ ತಂಡದ ಫ್ರೆಂಚ್ ಫುಟ್ಬಾಲ್ ಆಟಗಾರ ಪಾಲ್ ಪೊಗ್ಬಾ ಬಳಿಕದ ಸ್ಥಾನದಲ್ಲಿದ್ದಾರೆ. ಕೊಹ್ಲಿ, ಗಾಲ್ಫರ್ ಜೊರ್ಡನ್ ಸ್ಪಿತ್‌ಗಿಂತ ಸ್ವಲ್ಪವೇ ಮುಂದಿದ್ದಾರೆ. ಜೊಕೊವಿಕ್ ಪಟ್ಟಿಯಲ್ಲಿ 23ನೆ ಸ್ಥಾನದಲ್ಲಿದ್ದಾರೆ. ಸ್ಪ್ರಿಂಟ್ ಕಿಂಗ್ ಉಸೈನ್ ಬೋಲ್ಟ್ 31 ನೆ ಸ್ಥಾನದಲ್ಲಿದ್ದಾರೆ.
ಫಾರ್ಮುಲಾ ಒನ್ ಚಾಂಪಿಯನ್ ಲೂವಿಸ್ ಹ್ಯಾಮಿಲ್ಟನ್ 2014ರಲ್ಲಿ ನಂ.1 ಸ್ಥಾನಕ್ಕೇರಿದ್ದರು. ಬಾರ್ಸಿಲೋನದ ಫುಟ್ಬಾಲ್ ಸ್ಟಾರ್ ನೇಮರ್ ಈವರ್ಷ ನಂ.8ನೆ ಸ್ಥಾನದಲ್ಲಿದ್ದು, 2012 ಹಾಗೂ 2013ರಲ್ಲಿ ಅಗ್ರ ಸ್ಥಾನದಲ್ಲಿದ್ದರು.





