ಜಾತಿಗಣತಿ: ಜೂ.30ರೊಳಗೆ ವರದಿ ಸಲ್ಲಿಕೆಗೆ ಆಂಜನೇಯ ಸೂಚನೆ

ಬೆಂಗಳೂರು, ಮೇ 26: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜೂ.30ರೊಳಗಾಗಿ ಸರಕಾರಕ್ಕೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೂಚನೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ನಡೆದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಾಮಾಜಿಕ ನ್ಯಾಯವನ್ನು ಪ್ರತಿಯೊಬ್ಬರಿಗೂ ಕಲ್ಪಿಸುವ ಉದ್ದೇಶದಿಂದ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 5.98 ಕೋಟಿ ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು.
ಸದ್ಯಕ್ಕೆ ಲಭ್ಯವಾಗುತ್ತಿರುವ ಮಾಹಿತಿಯನ್ನು ಆಧರಿಸಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಸ್ವಾತಂತ್ರ ನಂತರ ದೇಶದ ಯಾವ ರಾಜ್ಯವು ಮಾಡಿರದಂತಹ ಸಮೀಕ್ಷೆಯನ್ನು ನಮ್ಮ ಸರಕಾರ ಕೈಗೊಂಡು, ಅನ್ಯಾಯಕ್ಕೆ ಒಳಗಾಗಿರುವ ಜನಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದಾಗಿ ಅತ್ಯಂತ ಪಾರದರ್ಶಕವಾಗಿ ಈ ಸಮೀಕ್ಷೆ ಕಾರ್ಯ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಹುದಿನದ ಕನಸು ಸಾಕಾರಗೊಳ್ಳುವ ಸಮಯ ಸನ್ನಿಹಿತವಾಗಿದೆ. ಆದರೆ, ಈ ಸಮೀಕ್ಷೆಯ ಮೂಲ ಉದ್ದೇಶ ಸಾಮಾಜಿಕ ಕಳಕಳಿ, ಸಾಮಾಜಿಕನ್ಯಾಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಲಿ ಎಂದು ಆಂಜನೇಯ ಅಧಿಕಾರಿಗಳಿಗೆ ತಿಳಿಸಿದರು.





