ಜೂ.4ರಂದು ಸಾಮೂಹಿಕ ರಜೆಗೆ ಪೊಲೀಸರ ನಿರ್ಧಾರ
ವೇತನ ತಾರತ್ಯಮ ನಿವಾರಣೆಗೆ ಒತ್ತಾಯ

ಮೂಡಿಗೆರೆ, ಮೇ 26: ವೇತನ ತಾರತಮ್ಯ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 4ರಂದು ರಾಜ್ಯಾದ್ಯಂತ ಪೊಲೀಸ್ ಪೇದೆಗಳು ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವ ಸಂಬಂಧ ತಾಲೂಕಿನ 6 ಪೊಲೀಸ್ ಠಾಣೆಗಳ ಪೇದೆಗಳು ರಜೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸಿದ್ದಾರೆ.
ಮೂಡಿಗೆರೆ ಪೊಲೀಸ್ ಠಾಣೆ ಸೇರಿದಂತೆ, ಗೋಣಿಬೀಡು, ಬಣಕಲ್, ಬಾಳೂರು, ಕಳಸ ಮತ್ತು ಕುದುರೆ ಮುಖ ಪೊಲೀಸರು ರಜೆ ಕೋರಿ ತಮ್ಮ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೆಸರು ಹೇಳಲು ಇಚ್ಚಿಸದ ಪೊಲೀಸರೋರ್ವರು ಮಾಧ್ಯಮದವರೊಂದಿಗೆ ಮಾತನಾಡಿ, ಜೂ. 4ರಂದು ಬೀದಿಗಿಳಿದು ಪ್ರತಿಭಟನೆ ಮಾಡುವುದಿಲ್ಲ. ಸಾಮೂಹಿಕ ರಜೆ ಹಾಕುವ ಮೂಲಕ ನಮ್ಮ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಶೇ.40ರಷ್ಟು ವೇತನ ತಾರತಮ್ಯ ನಮ್ಮ ರಾಜ್ಯದಲ್ಲಿದೆ. ಆದರೂ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಧರ್ಮವೀರ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ವಾರದ ರಜೆಯಂದು 200 ರೂ.ಗಳ ವೇತನ ಮಾತ್ರ ನೀಡುತ್ತಿರುವುದನ್ನು ಪೂರ್ಣ ವೇತನ ಮಾಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಕೆಲಸಗಳಿಗೆ ಪೇದೆಗಳನ್ನು ಬಳಸಿಕೊಳ್ಳಬಾರದು. ಅಧಿಕಾರಿಗಳು ಪೇದೆಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಮತ್ತಿತರೆ ಬೆೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.







