‘ಸ್ವಯಂ ಉದ್ಯೋಗದಿಂದ ಮಹಿಳೆಯರ ಆರ್ಥಿಕ ಸಬಲೀಕರಣ’

ಸಾಗರ,ಮೇ 26: ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡರೆ ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗುತ್ತದೆ ಎಂದು ಮೌಲಾನಾ ಅಬ್ದುಲ್ ಅಲೀಂ ಖಾಸಿಮಿ ಹೇಳಿದ್ದಾರೆ.
ಇಲ್ಲಿನ ಸರಕಾರಿ ಉರ್ದು ಶಾಲೆಯಲ್ಲಿ ಬುಧವಾರ ಸಫಾ ಬೈತುಲ್ ಮಾಲ್ ಸಂಸ್ಥೆ ವತಿಯಿಂದ ಆರು ತಿಂಗಳ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾದರೆ ಕುಟುಂಬದ ಸ್ಥಿತಿ ಉತ್ತಮಗೊಳ್ಳುತ್ತದೆ. ಬದಲಾದ ದಿನಮಾನಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೊಲಿಗೆ ತರಬೇತಿಯಲ್ಲಿ ಪ್ರಾವೀಣ್ಯತೆ ಪಡೆದರೆ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ ಎಂದರು. ಸಫಾ ಬೈತುಲ್ ಮಾಲ್ ಅಧ್ಯಕ್ಷ ಮೌಲಾನಾ ಕಲೀಮುಲ್ಲಾ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ನಗರಸಭಾ ಸದಸ್ಯ ಮಂಜೂರಾಲಿಖಾನ್, ಮಜ್ಲಿಸೆ ಮುಂತಜಿಮಾ ಜಮೀಯತುಲ್ ಮುಸ್ಲಿಮ್ ಅಧ್ಯಕ್ಷ ಸೈಯದ್ ಮುನಾವರ್, ಫಯಾಝ್ ಅಹ್ಮದ್, ಅಬ್ದುಲ್ ರಹೀಂ, ಇರ್ಷಾದ್ ಅಲೀಖಾನ್, ಕೆ.ಬಾಷಾ, ಹಾಫೀಝ್ ಶಫಿವುಲ್ಲಾ, ಮೋಸಿನ್ ಖಾನ್ ಉಪಸ್ಥಿತರಿದ್ದರು.





