ಹಾರಂಗಿ ವಿತರಣಾ ನಾಲೆ ಅಭಿವೃದ್ಧಿಗೆ 116 ಕೋಟಿ ರೂ.: ಸಚಿವ ಎ. ಮಂಜು

ಕುಶಾಲನಗರ, ಮೇ 26: ಹಾರಂಗಿ ಯೋಜನಾ ವೃತ್ತದ ಪಿರಿಯಾಪಟ್ಟಣ ಹಾಗೂ ಅರಕಲಗೂಡು ತಾಲೂಕು ವ್ಯಾಪ್ತಿಯ ಹಾರಂಗಿ ವಿತರಣಾ ನಾಲೆಗಳನ್ನು 116 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ತಿಳಿಸಿದ್ದಾರೆ.
ಹಾರಂಗಿ ಪ್ರವಾಸಿ ಮಂದಿರದಲ್ಲಿ ನಡೆದ ಹಾರಂಗಿ ನಾಲಾ ವಿಭಾಗದ ಉಪವಿಭಾಗಗಳ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಿಂದ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಸಮರ್ಪಕ ಬಳಕೆ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನೆ ಸಭೆ ಸಂದರ್ಭ ಕಂಡುಬಂದ ಅಧಿಕಾರಿಗಳ ನ್ಯೂನತೆಗಳ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.
ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ಪಶು ವೈದ್ಯ ಕೀಯ ಆಸ್ಪತ್ರೆಗೆ ಬೇಡಿಕೆ ಕೇಳಿ ಬಂದಿದೆ. ಗುಡ್ಡೆಹೊಸೂರು ಭಾಗದಲ್ಲಿ ನೂತನ ಪಶುವೈದ್ಯಕೀಯ ಆಸ್ಪತ್ರೆ ಆರಂಭಿಸುವ ಕುರಿತಾಗಿ ಚಿಂತಿಸಲಾಗುವುದು ಎಂದರು. ಈ ಪ್ರದೇಶಗಳಲ್ಲಿ ಹೆಚ್ಚಿನ ರಾಸುಗಳು ಇರುವ ಕಾರಣ ಇಲ್ಲಿಗೆ ಆದ್ಯತೆ ಕಲ್ಪಿಸಲಾಗಿದೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಒಕ್ಕೂಟಗಳಿಂದ ಪ್ರತಿದಿನ 7 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಕೊಡಗಿನಲ್ಲಿ 12 ರಿಂದ 15 ಸಾವಿರ ಲೀ. ಸಂಗ್ರಹವಾಗುತ್ತಿದೆ. ಪ್ರತಿ ದಿನ 30 ಸಾವಿರ ಲೀ. ಬಳಕೆಯಾಗುತ್ತಿದೆ ಎಂದು ಸಚಿವರು ತಿಳಿಸಿದರು. ಇಲಾಖೆ ವತಿಯಿಂದ ಪ್ರತೀ ಲೀ. ಹಾಲಿಗೆ ರೈತರಿಗೆ 4 ರೂ. ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ. ಹಾಲನ್ನು ನೇರವಾಗಿ ಸಂಘಕ್ಕೆ ನೀಡುವ ರೈತನ ಖಾತೆಗೆ ಪ್ರೋತ್ಸಾಹ ಧನವನ್ನು ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ವಿತರಿಸುವ ಕ್ರಮಕ್ಕೆ ಇಲಾಖೆ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.
ಪಶುಭಾಗ್ಯ ಯೋಜನೆಯಡಿ ರೈತರಿಗೆ ರಾಸುಗಳನ್ನು ವಿತರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ವಿತರಿಸಲು ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು. ರಾಸುಗಳಿಗೆ ಸಂಬಂಧಿಸಿದಂತೆ ಪ್ರತೀ ಜಿಲ್ಲೆಯಲ್ಲಿ ಪಾಲಿಕ್ಲಿನಿಕ್ ಸೇವೆ ಆರಂಭಿಸಲಾಗಿದೆ. ರಾಸುಗಳ ಸಂಖ್ಯೆ ಅಧಿಕವಾಗಿರುವ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಈ ಸೇವೆ ಆರಂಭಿಸಲಾಗುವುದು ಎಂದರು.
ಕುಶಾಲನಗರ ಸಮೀಪದ ಮದಲಾಪುರ ಗ್ರಾಮದಲ್ಲಿ ಮಲೆನಾಡು ಗಿಡ್ಡ ಎಂಬ ರಾಸು ತಳಿಯ ಸಂವರ್ಧನೆ ಕೇಂದ್ರ ಆರಂಭಿಸಲು 5 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಸಚಿವ ಮಂಜು ಮಾಹಿತಿ ನೀಡಿದರು.
ಹಾಲು ಮತ್ತು ಕೃಷಿಗೆ ಸಂಬಂಧಿಸಿದಂತೆ ಸರಕಾರ ಈ ಸಾಲಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸ್ವಾವಲಂಬಿಗಳಾಗುವುದರೊಂದಿಗೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಡು, ಕುರಿ, ಕೋಳಿ ಸಾಕಣೆಗೆ ಮಹಿಳೆಯರು ಮುಂದಾಗಬೇಕು. ಆಡಿನ ಹಾಲು ಅತ್ಯಂತ ಆರೋಗ್ಯಕಾರಿಯಾಗಿರುವ ಕಾರಣ ಅದರ ಮಾರಾಟಕ್ಕೆ ಇಲಾಖೆ ಮೂಲಕ ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ಕರಕುಶಲ ನಿಗಮ ಮಂಡಳಿ ಅಧ್ಯಕ್ಷ ಶಾಂತೆಯಂಡ ವೀಣಾ ಅಚ್ಚಯ್ಯ, ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ಸಹಾಯಕ ಅಭಿಯಂತರ ಧರ್ಮರಾಜು, ಕೊಣನೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಜಯರಾಂ, ಗುಣಮಟ್ಟ ಪರಿವೀಕ್ಷಕ ಸತ್ಯನಾರಾಯಣ, ಹಾರಂಗಿ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಚೌಡೇಗೌಡ, ಅಧಿಕಾರಿಗಳಾದ ವರಮಹಾಲಕ್ಷ್ಮೀ, ಕಿರಣ್, ಪಶುಸಂಗೋಪನಾ ಇಲಾಖೆಯ ಆಯುಕ್ತ ಶೇಖರ್, ಮೈಸೂರು ವಿಭಾಗದ ಜಂಟಿ ನಿರ್ದೇಶಕ ರಾಮಚಂದ್ರ, ಕೊಡಗು ಜಿಲ್ಲಾ ಉಪನಿರ್ದೇಶಕ ಡಾ.ನಾಗರಾಜ್, ಸೋಮವಾರಪೇಟೆ ವಿಭಾಗದ ಸಹಾಯಕ ನಿರ್ದೇಶಕ ಡಾ.ಚೆಟ್ಟಿಯಪ್ಪ, ವೀರಾಜಪೇಟೆ ವಿಭಾಗದ ಡಾ.ಮೋಟಯ್ಯ ಸೇರಿದಂತೆ ಇಲಾಖೆ ಅಧಿಕಾರಿಗಳುಭಾಗವಹಿಸಿದ್ದರು.







