ಚಿಕುನ್‌ಗುನ್ಯಾ ರೋಗ ಹರಡದಂತೆ ಎಚ್ಚರಿಕೆ ವಹಿಸಲು ಸೂಚನೆ

ಚಿಕ್ಕಮಗಳೂರು, ಮೇ 26: ತಾಲೂಕಿನ ಬುಲು ಪ್ರದೇಶದ ಜನರಲ್ಲಿ ಆತಂಕ ಮೂಡಿಸಿರುವ ಶಂಕಿತ ಚಿಕುನ್‌ಗುನ್ಯಾ ಸಾಂಕ್ರಾಮಿಕ ರೋಗ ಭೀತಿಯನ್ನು ತಡೆಗಟ್ಟಲು ತಾಲೂಕು ಪಂಚಾಯತ್ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾಪಂ ಸಭಾಂಗಣದಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆೆಯಲ್ಲಿ ಮಾತನಾಡಿದರು. ಮರ್ಲೆ, ಲಕ್ಯಾ, ಕಳಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಶಂಕಿತ ಚಿಕುನ್ ಗುನ್ಯಾ ರೋಗದ ಭೀತಿಯಲ್ಲಿ ಜನ ಜೀವನ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಈ ಭಾಗದಲ್ಲಿ ಚರಂಡಿ ಮತ್ತು ರಸ್ತೆಗಳನ್ನು ನಿತ್ಯ ಸ್ವಚ್ಛ ಮಾಡಬೇಕು. ಸ್ಥಳೀಯ ಗ್ರಾಪಂ ಪಿಡಿಒಗಳು ಈ ಬಗ್ಗೆ ನಿಗಾವಹಿಸುವಂತೆ ಸೂಚಿಸಿದರು.
ಈಗಾಗಲೇ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಕೃಷಿ ಅಧಿಕಾರಿಗಳು ರೈತರಿಗೆ ಬಿತ್ತನೆ ಬೀಜ ನೀಡುವಲ್ಲಿ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಕೇಂದ್ರದಿಂದ ಬಂದಂತಹ ಬರ ಪರಿಹಾರದ ಹಣ ಎಲ್ಲ ರೈತರಿಗೂ ಸರಿಯಾದ ಸಮಯಕ್ಕೆ ತಲುಪಿಸಬೇಕು. ತಾಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಹೇಶ್ ಸೂಚಿಸಿದರು.
ತಾಲೂಕಿನ ತೊಗರಿಹಂಕಲ್, ಹಿರೇಬಿದ್ರೆ, ಶಿವಪುರ, ಮಲ್ಲೇನಹಳ್ಳಿ, ನಿಂಗೇನಹಳ್ಳಿ, ಹಲಸಬಾಳು, ನೆಟ್ಟೆಕೆರೆಹಳ್ಳಿ, ಕರ್ತಿಕೆರೆ, ಕಳಸಾಪುರ, ಕೆ.ಬಿ.ಹಾಳ್, ಈಶ್ವರಹಳ್ಳಿ, ದೇವಗೊಂಡನಹಳ್ಳಿ ಸೇರಿದಂತೆ ಲಕ್ಯಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಕೆಲವಡೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಹಳೆಯ ಬೋರ್‌ವೆಲ್‌ಗಳನ್ನು ರೀಫ್ರೆಶ್ ಮಾಡುವುದು, ಕೆಲವು ಕಡೆ ಹೊಸ ಬೋರ್‌ವೆಲ್‌ಗಳನ್ನು ಕೊರೆಸಿಕೊಡುವಂತೆ ಸ್ಥಳೀಯ ಕೆಲವು ಸದಸ್ಯರು ಮನವಿ ಮಾಡಿದರು.
ಹೆಬ್ಬಳ್ಳಿ ಅರಿಶಿನಗುಪ್ಪೆಯಲ್ಲಿ ಜಲಾನಯನ ಅಧಿಕಾರಿಗಳು ಸ್ಥಳೀಯ ಪ್ರತಿನಿಧಿಗಳ ಗಮನಕ್ಕೆ ತಾರದೆ ಇಂಗುಗುಂಡಿಗಳನ್ನು ನಿರ್ಮಿಸುತ್ತಿದ್ದು ಈ ಕಾಮಗಾರಿ ಕ್ರಮವಾಗಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ ಎಂದು ಉಪಾಧ್ಯಕ್ಷ ವೈ.ಜಿ.ಸುರೇಶ್ ಆರೋಪಿಸಿದಾಗ, ಈ ಬಗ್ಗೆ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಗೆ ಕೃಷಿ ಅಧಿಕಾರಿ ಭರವಸೆ ನೀಡಿದರು.
ವಸ್ತಾರೆ ಕ್ಷೇತ್ರದ ಸದಸ್ಯ ಡಿ.ಜೆ.ಸುರೇಶ್ ಮಾತನಾಡಿ, ಸರಕಾರದಿಂದ ತಾಪಂಗೆ ಬರುವ ಅನುದಾನದಲ್ಲಿ ಯಾವುದೇ ಕ್ಷೇತ್ರಗಳನ್ನು ಕಡೆಗಣಿಸದೆ ಸಮನಾಗಿ ಅನುದಾನ ಹಂಚುವ ಮೂಲಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲು ತಿಳಿಸಿದರು.
ಉಪಾಧ್ಯಕ್ಷ ವೈ.ಜಿ.ಸುರೇಶ್, ಸದಸ್ಯರಾದ ಕರ್ತಿಕೆರೆ ಜಯಣ್ಣ, ರಮೇಶ್, ಶಾರದಾ, ಶುಭಾ, ರೇಖಾ, ಭವ್ಯನಟೇಶ್, ದೀಪಾನಾಗೇಶ್, ಸಾವಿತ್ರಿ, ಮಲ್ಲಿಕಾರ್ಜುನಪ್ಪ, ಕುಸುಮಾ, ಅರ್ಪಿತಾ, ರಮೇಶ್ ಸಿದ್ದಾಪುರ, ಪುಷ್ಪಾ, ಕೆ.ಯು.ಮಹೇಶ್, ಇಒ ಧನರಾಜ್ ಉಪಸ್ಥಿತರಿದ್ದರು.







