ಚುಟುಕು ಸುದ್ದಿಗಳು
ಬೈಕ್ ಢಿಕ್ಕಿ: ಸಹಸವಾರನಿಗೆ ಗಾಯ
ಕಾರ್ಕಳ, ಮೇ 26: ಬೈಕ್ ಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಗಾಯಗೊಂಡ ಘಟನೆ ಮುಡಾರು ಗ್ರಾಮದ ಮುಡ್ರಾಲು ದುರ್ಗಾಪರಮೇಶ್ವರಿ ದೇವಳದ ದ್ವಾರದ ಬಳಿ ಸಂಭವಿಸಿದೆ. ಬಿಹಾರ ಮೂಲದ ಪ್ರಸ್ತುತ ಕಡಾರಿ ನಿವಾಸಿ ಜಮ್‌ಶೀದ್(22) ಎಂಬಾತ ಗಾಯಗೊಂಡಿದ್ದಾರೆೆ. ಅವರು ಮಾಸೂಮ್ ಜತೆ ಕಡಾರಿಗೆ ತೆರಳುತ್ತಿದ್ದ ಸಂದರ್ಭ, ಬೈಕ್ ಕಲ್ಲಿಗೆ ಢಿಕ್ಕಿ ಹೊಡೆದಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲಬೆಟ್ಟು: ಕಾರು ಢಿಕ್ಕಿ; ಮಹಿಳೆ ಮೃತ್ಯು
ಮೂಡುಬಿದಿರೆ, ಮೇ 26: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಬುಧವಾರ ಸಂಜೆ ಕಲ್ಲಬೆಟ್ಟುವಿನಲ್ಲಿ ನಡೆದಿದೆ.ಕಲ್ಲಬೆಟ್ಟು ನೆಹರು ನಗರದ ದಿ.ಚಂದ್ರಶೇಖರ ರಾವ್ ಅವರ ಪತ್ನಿ ಜಯಶ್ರೀ (59) ಮೃತಪಟ್ಟವರು. ಜಯಶ್ರೀ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ವೇಣೂರು ಕಡೆ ಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಕಾರು ಚಾಲಕ ಉಜಿರೆಯ ತಿಮ್ಮಪ್ಪ ಎಂಬಾತನ ವಿರುದ್ಧ ಮೂಡು ಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇಬಲ್ ಮಾಲಕನ ವಿರುದ್ಧ ದೂರು
ಕಾರ್ಕಳ, ಮೇ 26: ಕಾರ್ಕಳದ ಆರ್‌ಎಸ್‌ಟಿ ಡಿಜಿಟಲ್ ಮೀಡಿಯಾ ಸರ್ವೀಸಸ್ ಮಾಲಕ ವಿಜೇಶ್ ಬಿ.ಶೆಟ್ಟಿ ವಿರುದ್ಧ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರು ಸ್ಟಾರ್ ಟಿವಿ ಚಾನೆಲ್‌ಗಳನ್ನು ಯಾವುದೇ ಪರವಾನಿಗೆಯಿಲ್ಲದೆ ಸನ್‌ಡೈರೆಕ್ಟ್ ಡಿಟಿಹೆಚ್ ಮೂಲಕ ಕಳವು ಮಾಡಿ ಗ್ರಾಹಕರಿಗೆ ಕೇಬಲ್ ಟಿವಿ ಮೂಲಕ ಪ್ರಸಾರ ಮಾಡಿರುತ್ತಾರೆ ಎಂದು ಆರೋಪಿಸಿ, ಸ್ಟಾರ್ ಟಿವಿಯ ಅಧಿಕಾರಿ ಮುಂಬೈನ ನಿಲೇಶ್ ಅನಂತ್ ಸಾವಂತ್ ದೂರು ನೀಡಿದ್ದಾರೆ.
ನಿಧನ
ಹಾಜಿ ಉಮರ್ ಕುಂಞಿ
ಕೊಣಾಜೆ, ಮೇ 26: ಮುಡಿಪು ನಿವಾಸಿ ಹಾಜಿ ಉಮರ್ ಕುಂಞಿ ಮಾಸ್ಟರ್(62) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ದೇರಳಕಟ್ಟೆ ರಂಜಾಡಿ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಅವರು ವಿವಿಧ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ಹಾಗೂ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಸುನ್ನಿ ಸಂದೇಶಕ್ಕೆ 14ನೆ ವರ್ಷದ ಸಂಭ್ರಮ
ಜೂ.3ರಂದು ಸಮಸ್ತ ನಾಯಕರಿಗೆ ಸನ್ಮಾನ
ಮಂಗಳೂರು, ಮೇ 26: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ವತಿಯಿಂದ ಸುನ್ನಿ ಸಂದೇಶ 14ನೆ ವರ್ಷದ ಸಂಭ್ರಮದ ಪ್ರಯುಕ್ತ ಜೂನ್ 3ರಂದು ಅಪರಾಹ್ನ 3:30ಕ್ಕೆ ಮಂಗಳೂರಿನ ಪುರಭವನದಲ್ಲಿ ‘ರಮಝಾನ್ ಕರೆಯುತ್ತಿದೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಕೋಯಕುಟ್ಟಿ ಉಸ್ತಾದ್ ಹಾಗೂ ಚೆರುಶ್ಶೇರಿ ಉಸ್ತಾದ್‌ರ ಅನುಸ್ಮರಣೆ ಹಾಗೂ ಸಮಸ್ತ ನಾಯಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಶೈಖುನಾ ಖಾಝಿ ತ್ವಾಖಾ ಉಸ್ತಾದ್ ಅಧ್ಯಕ್ಷತೆ ವಹಿಸುವರು. ಸಮಾರಂಭವನ್ನು ಜಬ್ಬಾರ್ ಉಸ್ತಾದ್ ಉದ್ಘಾಟಿಸುವರು. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುಆಗೈಯುವರು. ಆಲಿಕುಟ್ಟಿ ಉಸ್ತಾದ್, ಎಂ.ಟಿ.ಉಸ್ತಾದ್, ಕೊಯ್ಯೋಡು ಉಸ್ತಾದ್, ಖಾಸಿಂ ಉಸ್ತಾದ್, ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಅಧ್ಯಕ್ಷ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಂಬ್ರಾಣ ಉಸ್ತಾದ್ ಮತ್ತಿತರರನ್ನು ಇದೇ ವೇಳೆ ಸನ್ಮಾನಿಸಲಾಗುವುದು
‘ರಂಝಾನ್ ಕರೆಯುತ್ತಿದೆ’ ಎಂಬ ವಿಷಯದಲ್ಲಿ ವಿದ್ವಾಂಸ ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಹಾಗೂ ‘ಸಮಸ್ತದ ಮಹೋನ್ನತ ನಾಯಕ ’ ಎಂಬ ವಿಷಯ ದಲ್ಲಿ ಹಾಜಿ ಅಬ್ದುಸ್ಸಮದ್ ಪೂಕೋಟೂರ್ ಮುಖ್ಯ ಭಾಷಣ ಮಾಡ ಲಿದ್ದಾರೆ. ಸುನ್ನಿ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ.ಎಸ್.ಹೈದರ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡುವರು. ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ ಹಾಗೂ ಸಿತಾರ್ ಮಜೀದ್ ಹಾಜಿ ವಿವಿಧ ವಿಷಯಗಳಲ್ಲಿ ಭಾಷಣ ಮಾಡುವರು ಎಂದು ಮುಸ್ತಫಾ ಫೈಝಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರಣಿ ಕಳ್ಳತನ ಆರೋಪಿ ತಂಗರಾಜುಕಸ್ಟಡಿ ವಿಸ್ತರಣೆಗೆ ಪೊಲೀಸರ ಅರ್ಜಿ
ಪುತ್ತೂರು, ಮೇ 26: ನಗರದ 7 ಮನೆಗಳಲ್ಲಿ ಬೀಗ ಮುರಿದು ನಗ ನಗದು ಕಳವು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರಿಂದ ಬಂಧಿತನಾಗಿ ರುವ ಕುಖ್ಯಾತ ಕಳ್ಳ ತಂಗರಾಜುವಿನ ಪೊಲೀಸ್ ಕಸ್ಟಡಿ ಮೇ 28ಕ್ಕೆ ಮುಕ್ತಾಯಗೊಳ್ಳಲಿದ್ದು, ಈತನ ತನಿಖೆ ಮುಗಿಯದಿರುವ ಕಾರಣ ಮತ್ತೆ 8ದಿನಗಳಿಗೆ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆಪುತ್ತೂರು ನ್ಯಾಯಾಲಯಕ್ಕೆ ನಗರ ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆ.
ಪತಿಯ ಕೊಲೆ: ಪತ್ನಿಯ ವಿರುದ್ಧ ಆರೋಪ ಸಾಬೀತು
ಕಾಸರಗೋಡು, ಮೇ 26: ಪನತ್ತಡಿಯ ಯಶವಂತರ ಕೊಲೆಗೆ ಸಂಬಂಧಪಟ್ಟಂತೆ ಆತನ ಪತ್ನಿ ತಪ್ಪಿತಸ್ಥೆ ಎಂದು ಜಿಲ್ಲಾ 3ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣ ನಾಳೆ ಪ್ರಕಟಗೊಳ್ಳಲಿದೆ. ಪನತ್ತಡಿಯ ಚಾಮುಂಡಿಕುನ್ನುವಿನ ಯಶವಂತ(39)ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಟಿ. ಆರ್. ಪ್ರಸೀದಾ (32) ತಪ್ಪಿತಸ್ಥೆ ಎಂದು ಸಾಬೀತಾಗಿದೆ. 2013ರ ಅಕ್ಟೋಬರ್ 18ರಂದು ಸಂಜೆ ಘಟನೆ ನಡೆದಿತ್ತು.
ಪಾನಮತ್ತನಾಗಿ ಮನೆಗೆ ಬಂದಿದ್ದ ಯಶವಂತ ಹಲ್ಲೆಗೆತ್ನಿಸಿದಾಗ ಪ್ರಸೀದಾ ಮರದ ತುಂಡಿನಿಂದ ತಲೆಗೆ ಬಡಿದಿದ್ದಾರೆ. ಕುಸಿದುಬಿದ್ದ ಯಶವಂತ ಸ್ಥಳದಲ್ಲೇ ಮೃತಪಟ್ಟಿದ್ದರು. ವೆಳ್ಳರಿಕುಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.







