ಒಲಿಂಪಿಕ್ಸ್‌ನಲ್ಲಿ ಭ್ರಷ್ಟಾಚಾರ: ತನಿಖೆಗೆ ನಿರ್ಧಾರ
ರಿಯೊ ಡಿ ಜನೈರೊ, ಮೇ 26: ಬ್ರೆಝಿಲ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರದ ತನಿಖೆ ನಡೆಸಲು ಬ್ರೆಝಿಲ್ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಹಿಂದೆ ಒಲಿಂಪಿಕ್ಸ್ ನೇರ ಸಂಪರ್ಕವಿರದ ಆಸ್ತಿ ಪಾಸ್ತಿಗಳ ಬಗ್ಗೆ ತನಿಖೆ ನಡೆಸಿದ್ದ ಫೆಡರಲ್ ತನಿಖಾಧಿಕಾರಿಗಳು ಇದೀಗ ಒಲಿಂಪಿಕ್ಸ್ ಪಾರ್ಕ್ ಹಾಗೂ ಒಲಿಂಪಿಕ್ಸ್ ಸ್ಟೇಡಿಯಂಗಳಿರುವ ಡಿಯೊಡೊರಾ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾದ ಯೋಜನೆಯ ತನಿಖೆ ನಡೆಸಲು ನಿರ್ಧರಿಸಿದೆ ಎಂದು ಫೆಡರಲ್ ಪ್ರಾಸಿಕ್ಯೂಟರ್ ಲಿಯೊನಾರ್ಡೊ ಮಿಟಿಡಿಯೆರಿ ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ನೌಕಾ ಸ್ಪರ್ಧೆಗಳು ನಡೆಯುವ ಗುವಾನಬರಾ ಕೊಲ್ಲಿಯ ಸ್ವಚ್ಛತೆಗೆ ಮೀಸಲಾಗಿರಿಸಿದ್ದ ಫೆಡರಲ್ ಫಂಡ್‌ಗಳ ಖರ್ಚು-ವೆಚ್ಚಗಳ ಬಗ್ಗೆಯೂ ತನಿಖಾ ತಂಡ ತನಿಖೆ ನಡೆಸಲಿದೆ ಎಂದು ಲಿಯೊನಾರ್ಡೊ ತಿಳಿಸಿದರು.
ತನಿಖಾ ತಂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಯಾವುದೇ ಸಾಕ್ಷಿಯನ್ನು ಕಲೆ ಹಾಕಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಿಯೊನಾರ್ಡೊ, ಮುಂಬರುವ ದಿನಗಳಲ್ಲಿ ತನಿಖೆಯ ಫಲಿತಾಂಶದ ಬಗ್ಗೆ ವಿವರವಾದ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.





