ಟೀಮ್ ಇಂಡಿಯಾದ ನಿರ್ದೇಶಕನಾಗಿದ್ದು ಸ್ಮರಣೀಯ ಕ್ಷಣ: ಶಾಸ್ತ್ರಿ

ಹೊಸದಿಲ್ಲಿ, ಮೇ 26: ಭಾರತೀಯ ಕ್ರಿಕೆಟ್ ತಂಡದಲ್ಲಿ 18 ತಿಂಗಳ ಕಾಲ ನಿರ್ದೇಶಕನಾಗಿ ಕಾರ್ಯನಿರ್ವಹಿಸಿರುವುದು ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಟೀಮ್ ಡೈರೆಕ್ಟರ್ ಆಗಿ ಟೀಮ್ ಇಂಡಿಯಾದೊಂದಿಗೆ ಕಳೆದಿರುವ ಆ 18 ತಿಂಗಳು ನನ್ನ ಪಾಲಿಗೆ ಮರೆಯಲಾರದ ಕ್ಷಣವಾಗಿದ್ದವು. ನನ್ನ ಅವಧಿಯಲ್ಲಿ ತಂಡ ಏನುಸಾಧನೆ ಮಾಡಿದೆ ಎಂದು ಸಿಂಹಾವಲೋಕನ ಮಾಡಲು ಇಷ್ಟಪಡುವೆ. ತಂಡದ ಯಶಸ್ಸಿನ ಎಲ್ಲ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು ಎಂದು ಶಾಸ್ತ್ರಿ ಹೇಳಿದರು.
ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಜಾಹೀರಾತು ನೀಡಲು ನಿರ್ಧರಿಸಿದ್ದು, ನೀವು ಅರ್ಜಿ ಸಲ್ಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿ ಶಾಸ್ತ್ರಿ, ನಾನು ಐಪಿಎಲ್ ಫೈನಲ್ ಮಾನ್ಯತೆಗಾಗಿ ಮಾತ್ರ ಅರ್ಜಿ ಸಲ್ಲಿಸುವೆ ಎಂದರು.
2014ರಲ್ಲಿ ಭಾರತ ತಂಡ ಇಂಗ್ಲೆಂಡ್‌ನ ವಿರುದ್ಧ 1-3 ಅಂತರದಿಂದ ಸೋತ ಬಳಿಕ ಶಾಸ್ತ್ರಿ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ವರ್ಷಾರಂಭದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಕೊನೆಗೊಳ್ಳುವ ತನಕ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.
ಹೌದು, ನಾನು ಆಟಗಾರನಾಗಿಯೂ ಯಶಸ್ಸು ಕಂಡಿದ್ದೇನೆ. 1985ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 1983ರ ವಿಶ್ವಕಪ್ ಟೂರ್ನಿಯನ್ನು ಈಗಲೂ ಮರೆತಿಲ್ಲ. ಆ ಎರಡು ಪ್ರಮುಖ ಟೂರ್ನಿಯಲ್ಲಿ ಆಡಿರುವುದು ಹೆಮ್ಮೆಯ ಕ್ಷಣ. ಈ ಹಂತದಲ್ಲಿ ಟೀಮ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವುದು ವಿಶೇಷ. ಭಾರತ ತಂಡ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ನ್ನು ಮಣಿಸಿತ್ತು. ಆಸ್ಟ್ರೆಲಿಯದಲ್ಲಿ ಟ್ವೆಂಟಿ-20 ಸರಣಿಯಲ್ಲಿ ವೈಟ್‌ವಾಶ್ ಸಾಧಿಸಿತ್ತು. 22 ವರ್ಷಗಳ ನಂತರ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ದಶಕಗಳ ಬಳಿಕ ಸ್ವದೇಶದಲ್ಲಿ ದಕ್ಷಿಣ ಆಫ್ರಿಕವನ್ನು ಟೆಸ್ಟ್ ಸರಣಿಯಲ್ಲಿ ಮಣಿಸಿತ್ತು ಎಂದು ಶಾಸ್ತ್ರಿ ನುಡಿದರು.







