ರಶ್ಯದ ಒಲಿಂಪಿಕ್ಸ್ ತಂಡದಲ್ಲಿ ಶರಪೋವಾಗೆ ಸ್ಥಾನ!

ಮಾಸ್ಕೋ, ಮೇ 26: ಉದ್ದೀಪನಾ ದ್ರವ್ಯ ಸೇವನೆ ಆರೋಪದಲ್ಲಿ ಅಮಾನತು ಶಿಕ್ಷೆ ಅನುಭವಿಸುತ್ತಿರುವ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ರಶ್ಯ ಟೆನಿಸ್ ಫೆಡರೇಶನ್ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಶ್ಯ ಟೆನಿಸ್ ಫೆಡರೇಶನ್(ಆರ್‌ಟಿಎಫ್) ಪ್ರಕಟಿಸಿರುವ ಸಿಂಗಲ್ಸ್ ಆಟಗಾರರಿರುವ ಟೆನಿಸ್ ತಂಡದಲ್ಲಿ ಶರಪೋವಾರಲ್ಲದೆ ಸ್ವೆತ್ಲಾನಾ ಕುಝ್ನೆಸೋವಾ, ಅನಸ್ತೇಸಿಯಾ ಪಾವ್ಲಚೆಂಕೊವಾ ಹಾಗೂ ಡಾರ್ಯ ಕಸಟ್‌ಕಿನಾ ಸ್ಥಾನ ಪಡೆದಿದ್ದಾರೆ.
ಒಲಿಂಪಿಕ್ಸ್ ಗೇಮ್ಸ್ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ಗರಿಷ್ಠ ಅಂಕವನ್ನು ಪಡೆದಿರುವ ನಾಲ್ವರು ಮಹಿಳಾ ಆಟಗಾರ್ತಿಯರು ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬಹುದು.
ರಶ್ಯ ಪ್ರಕಟಿಸಿರುವ ತಂಡದಲ್ಲಿ ಶರಪೋವಾ ಸೇರ್ಪಡೆಯಾಗಿದ್ದರೂ ಆಕೆ ಭಾಗವಹಿಸುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ನಿಷೇಧಿತ ರಾಸಾಯನಿಕ ಮೆಲ್ಡೊನಿಯಮ್ ಸೇವಿಸಿದ ಆರೋಪದಲ್ಲಿ ಮಾ.12 ರಂದು ಸಕ್ರಿಯ ಟೆನಿಸ್‌ನಿಂದ ಶರಪೋವಾರನ್ನು ಅಮಾನತುಗೊಳಿಸಲಾಗಿತ್ತು.
ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಇನ್ನೂ ಶರಪೋವಾ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಒಂದು ವೇಳೆ, ಶರಪೋವಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದೇ ಇದ್ದರೆ ರಶ್ಯದ ಮಹಿಳಾ ಆಟಗಾರ್ತಿಯರಲ್ಲಿ 5ನೆ ಸ್ಥಾನದಲ್ಲಿರುವ ಯೆಕಟೆರಿಯನ್ ಮಕ್ಸಿಮೊವಾಗೆ ಅವಕಾಶ ನೀಡುವ ಸಾಧ್ಯತೆಯಿದೆ.







