ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ಸಂಘ-ಸಂಸ್ಥೆಗಳು ಶ್ರಮಿಸಬೇಕು : ಸಚಿವ ರೈ

ವಿಟ್ಲ, ಮೇ 27: ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ನಾಡಿನ ಸಂಘ-ಸಂಸ್ಥೆಗಳು ಕಠಿಣವಾಗಿ ಪರಿಶ್ರಮಿಸಬೇಕು. ಆ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಪಯತ್ನಿಸಬೇಕು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕರೆ ನೀಡಿದರು.
ಬಿ.ಸಿ.ರೋಡು ಸಮೀಪದ ಶಾಂತಿ ಅಂಗಡಿ ಮುಸ್ಲಿಂ ಯಂಗ್‌ಮೆನ್ಸ್ ಎಸೋಸಿಯೇಶನ್ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತೀಯೊಂದು ಧರ್ಮವೂ ವಿದ್ಯೆಗೆ ಮಹತ್ವವನ್ನು ನೀಡಿದ್ದು, ಅದರಲ್ಲೂ ಪವಿತ್ರ ಇಸ್ಲಾಂ ಧರ್ಮವು ಅತ್ಯಂತ ಹೆಚ್ಚಿನ ಮಹತ್ವವನ್ನು ಶಿಕ್ಷಣಕ್ಕೆ ನೀಡಿದೆ ಎಂಬುದಕ್ಕೆ ಪವಿತ್ರ ಕುರಾನ್ ಸಾಕ್ಷಿಯಾಗಿದೆ. ಸಮಾಜದಲ್ಲಿ ದೇವನು ಮೆಚ್ಚುವ ಕೆಲಸ ಮಾಡಿದರೆ ಅಂತಹವರಿಗೆ ಭಗವಂತನ ರಕ್ಷಣೆ ಖಂಡಿತಾ ದೊರೆಯುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಇಬ್ರಾಹಿಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುವಾಶಿರ್ವಚನಗೈದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಬೀಬುಲ್ಲಾ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಾಶಿವ ಬಂಗೇರ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಮಂಗಳೂರು ಪಿ.ಎ. ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಪಿ. ಸೂಫಿ, ಪಿ.ಎ. ರಹೀಂ ಬಿ.ಸಿ.ರೋಡು ಮೊದಲಾದವರು ಭಾಗವಹಿಸಿದ್ದರು. ಇಬ್ರಾಹಿಂ ಕೊಡಂಗೆ ಸ್ವಾಗತಿಸಿ, ಸಂಸ್ಥೆಯ ಕಾರ್ಯದರ್ಶಿ ಮನ್ಸೂರ್ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು.







