ಭ್ರಷ್ಟಾಚಾರ ಮಾಡಿಲ್ಲ, ಪ್ರಮಾಣಕ್ಕೆ ಸಿದ್ಧ : ಪ್ರಕಾಶ್ ಹೆಗ್ಡೆ
ಸುಳ್ಯ, ಮೇ 27: ನಗರ ಪಂಚಾಯತ್‌ನಲ್ಲಿ ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ವೆಂಕಪ್ಪ ಗೌಡರು ಸೋಮವಾರ ಕಲ್ಕುಡ ದೈವಸ್ಥಾನಕ್ಕೆ ಬಂದು ಈ ಕುರಿತಂತೆ ಪ್ರಮಾಣ ಮಾಡಬೇಕು, ನಾನೂ ಪ್ರಮಾಣ ಮಾಡುತ್ತೇನೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಎದಿರೇಟು ನೀಡಿದ್ದಾರೆ.
ಸುಳ್ಯ ನ.ಪಂ. ಎದುರು ಕಾಂಗ್ರೆಸ್ ಪ್ರತಿಭಟನಾ ಸಭೆ ಏರ್ಪಡಿಸಿದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ಮಾಡಿರುವ ಆರೋಪಗಳಿಗೆ ಪ್ರಕಾಶ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದರು. ಮುಖ್ಯಾಧಿಕಾರಿ ಎನ್.ಆರ್.ಸ್ವಾಮಿ ಕೂಡಾ ಉಪಸ್ಥಿತರಿದ್ದರು.
ರಾಜಕೀಯ ಪ್ರತಿಷ್ಠೆಗೆ ನಾನು ಟಾರ್ಗೆಟ್:
ನ.ಪಂ.ನಲ್ಲಿ ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ನಡೆಯಲೂ ಬಿಟ್ಟಿಲ್ಲ. ಆದರೂ ವೆಂಕಪ್ಪ ಗೌಡರು ವೈಯಕ್ತಿಕ ರಾಜಕೀಯ ಪ್ರತಿಷ್ಠೆಗೋಸ್ಕರ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಸುಳ್ಯ ನಗರ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಈ ವೇಗಕ್ಕೆ ಬ್ರೇಕ್ ಹಾಕುವುದು ಅವರ ಉದ್ದೇಶ ಎಂದು ಪ್ರಕಾಶ್ ಹೆಗ್ಡೆ ದೂರಿದರು.
ಸುಳ್ಯ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದಾಗ ನಾನು, ಮುಖ್ಯಾಧಿಕಾರಿ ಮತ್ತು ಎಲ್ಲಾ ಸಿಬ್ಬಂದಿಗಳು ನಿರಂತರವಾಗಿ ಕೆಲಸ ಮಾಡಿದ್ದೇವೆ. ದಿನಕ್ಕೆ ಐದಾರು ಸಲ ಪಂಪ್ ಹೌಸ್‌ಗೆ ಭೇಟಿ ನೀಡಿದ್ದೇವೆ. ರಾತ್ರಿ 8.30 ಯಿಂದ 1 ಗಂಟೆಯವರೆಗೂ ಅಲ್ಲಿ ಸುಮಾರು 14 ಮಂದಿ ಕೆಲಸ ಮಾಡಿದ್ದು, ಅವರ್ಯಾರಿಗೂ ಬೇರೆ ಸಂಬಳ ಇರಲಿಲ್ಲ. ಮಳೆ ಬಂದ ಬಳಿಕ ಅಲ್ಲಿನ ಪಂಪನ್ನು ಅನುಮತಿ ಪಡೆದು ಶಿಫ್ಟ್ ಮಾಡಿದ್ದರು. ಅಂದು ರಾತ್ರಿ ಅವರೆಲ್ಲ ಸೇರಿ ಹೊಟೇಲಿನಲ್ಲಿ ತಂದ ಊಟ ಮಾಡಿದ್ದಾರೆ. ಹೊರತು ಯಾವುದೇ ಮೋಜು ಮಸ್ತಿ ಮಾಡಿಲ್ಲ. ನಾನು ಮತ್ತಿತರ ಕೆಲವರು ಕೇರಳದ ಚುನಾವಣಾ ಪ್ರಚಾರಕ್ಕೆ ಹೋಗಿ ವಾಪಾಸು ಬರುವಾಗ ಅಲ್ಲಿಗೆ ಭೇಟಿ ನೀಡಿದ್ದು ನಿಜ. ಆಗ ಅಲ್ಲಿ ಚರ್ಚೆ ಆಗುತ್ತಿತ್ತು. ಸದಸ್ಯ ಉಮ್ಮರ್‌ರೊಂದಿಗೆ ಮಾತನಾಡಿ ಅಂದೇ ಆ ವಿಚಾರವನ್ನು ಮುಗಿಸಿದ್ದೇವೆ. ನಿರ್ಬಂಧಿತ ಜಾಗದಲ್ಲಿ ಊಟ ಮಾಡಿದ್ದು ಕಾನೂನು ಪ್ರಕಾರ ತಪ್ಪು. ಆದರೆ ಮಾನವೀಯ ದೃಷ್ಟಿಯಿಂದ ನಾವು ನೋಡಿದ್ದೇವೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಒಂದು ವರ್ಷದಲ್ಲಿ 1 ಕೋಟಿ 30 ಲಕ್ಷದಷ್ಟು ತೆರಿಗೆ ಸಂಗ್ರಹವಾಗಿದೆ. ಅನೇಕ ಅಭಿವೃದ್ಧಿ ಕಾಮಗಾರಿಗಳೂ ನಡೆದಿದೆ. ಕಾನೂನು ಬಾಹಿರವಾಗಿ ಯಾವುದನ್ನೂ ಮಾಡಿಲ್ಲ. ಇದನ್ನು ಸಹಿಸದೇ ಈಗ ಅವ್ಯವಹಾರದ ಆರೋಪ ಮಾಡಲಾಗುತ್ತಿದೆ. ಈಗ ಆರಂಭಗೊಂಡಿರುವ ಕಾಮಗಾರಿಗಳಲ್ಲಿ ಹಿಂದಿನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳೂ ಇರಬಹುದು. ನಾನು ಹೋದ ಮೇಲೆ ಮುಂದೆ ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳೂ ನಡೆಯುತ್ತದೆ. ಆದರೆ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿ ಸರಕಾರ ನೀಡಿದ ಅನುದಾನದಿಂದ ಮಾತ್ರ ಆಗಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯೆ:
ತನ್ನೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ವೆಂಕಪ್ಪ ಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿಯವರು, ನೀರಿನ ಸಮಸ್ಯೆಯ ಬಗ್ಗೆ ಅವರು ಫೋನ್ ಮಾಡಿದ್ದೂ ಹೌದು. ನಾನು ವಾಸ್ತವ ಸ್ಥಿತಿ ಹೇಳುತ್ತಿದ್ದಾಗ ಈ ಹಿಂದೆ ರಂಗೇಗೌಡರ ಸ್ಥಿತಿ ಏನಾಗಿದೆ ಗೊತ್ತಲ್ವ? ನಿಮಗೂ ಹಾಗೇ ಜೈಲಿಗೆ ಹೋಗಬೇಕಾ ಎಂದೆಲ್ಲ ಪ್ರಶ್ನಿಸತೊಡಗಿದರು. ನನಗೆ ದಮ್ಕಿ ಹಾಕಲು ಬರಬೇಡಿ, ಬೇಕಿದ್ದರೆ ದೂರು ಸಲ್ಲಿಸಿ. ಸಸ್ಪೆಂಡ್ ಮಾಡಿಸುವುದಿದ್ದರೂ ಮಾಡಿಸಿ ಎಂದು ನಾನು ಹೇಳಿದೆ. ಅವರು ಹೀಗೆ ಬೇಕೆಂತಲೇ ಟಾರ್ಚರ್ ಮಾಡುವುದು ಸರಿಯಲ್ಲ ಎಂದು ಹೇಳಿದರು.







