ರಮೇಶ್ ಚೆನ್ನಿತ್ತಲ ಕೇರಳ ವಿಧಾನಸಭಾ ಪ್ರತಿಪಕ್ಷನಾಯಕನ ಸ್ಥಾನಕ್ಕೆ

ತಿರುವನಂತಪುರಂ, ಮೇ 27: ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಲಿದ್ದಾರೆ. ಈ ಕುರಿತು ಯುಡಿಎಫ್‌ನಲ್ಲಿ ಒಮ್ಮತದ ತೀರ್ಮಾನ ಬರಲಾಗಿದೆಯೆಂದು ವರದಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್, ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮುಂದಾಳುತ್ವದಲ್ಲಿ ನಡೆದ ಚರ್ಚೆಯಲ್ಲಿ ಸಹಮತಕ್ಕೆ ಬರಲಾಗಿದೆ. ಚುನಾವಣೆಯಲ್ಲಾದ ಸೋಲಿಗೆ ಹೊಣೆಯನ್ನು ಸ್ವಯಂ ವಹಿಸಿಕೊಂಡಿರುವ ಉಮ್ಮನ್ ಚಾಂಡಿ ಪ್ರತಿಪಕ್ಷನಾಯಕನ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂದು ತನ್ನ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದರು. ಆದರೆ ಉಮ್ಮನ್ ಚಾಂಡಿ ಯುಡಿಎಫ್ ಚೇರ್‌ಮೆನ್ ಆಗಿ ಮುಂದುವರಿಯಲಿದ್ದಾರೆ. ಪ್ರತಿಪಕ್ಷ ಉಪನಾಯಕನಾಗಿ ಕೆಸಿ ಜೋಸೆಫ್ ಆಯ್ಕೆಯಾಗಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇರಳದ ಉಸ್ತುವಾರಿಯಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ವಾಸ್ನಿಕ್ ಹೈಕಮಾಂಡ್‌ನ ಈ ಅಭಿಪ್ರಾಯವನ್ನು ತಿಳಿಸಿದ್ದರು. ಶೀಲಾ ದೀಕ್ಷಿತ್, ದೀಪಕ್ ಬಾಬ್ರಿಯ ಅವರು ಕೂಡಾ ಸಭೆಯಲ್ಲಿ ಭಾಗವಹಿಸಿದರು.
ಕೇರಳ ವಿಧಾನಸಭೆಯಲ್ಲಿ 22 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರಲ್ಲಿ 14 ಮಂದಿ ಐ ಗ್ರೂಪ್‌ನವರು. ಏಳು ಮಂದಿ ಎ ಗ್ರೂಪ್‌ನವರು. ಶಾಸಕರಾಗಿರುವ ಸುಧೀರನ್ ಪಕ್ಷದ ಕೇರಳ ರಾಜ್ಯ ಅಧ್ಯಕ್ಷರಾಗಿದ್ದಾರೆ. ಬಹುಮತ ಐ ಗ್ರೂಪ್‌ಗಿದ್ದುದರಿಂದ ರಮೇಶ್ ಚೆನ್ನಿತ್ತಲ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿತ್ತು ಎಂದು ವರದಿಯಾಗಿದೆ.







