ಶಸ್ತ್ರಚಿಕಿತ್ಸೆಗೆ ಇಂಗ್ಲೆಂಡ್‌ಗೆ ತೆರಳಲಿರುವ ಹಫೀಝ್

ಕರಾಚಿ, ಮೇ 27: ಮಂಡಿನೋವಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಒದಗಿಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತಂಡದ ಹಿರಿಯ ಬ್ಯಾಟ್ಸ್‌ಮನ್ ಮುಹಮ್ಮದ್ ಹಫೀಝ್‌ರನ್ನು ಇಂಗ್ಲೆಂಡ್‌ಗೆ ಕಳುಹಿಸಿಕೊಡುವ ಸಾಧ್ಯತೆಯಿದೆ.
ಹಫೀಝ್ ತನ್ನನ್ನು ಕಾಡುತ್ತಿರುವ ಮಂಡಿನೋವಿನ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಏಷ್ಯಾಕಪ್‌ನ ವೇಳೆ ಗಾಯಗೊಂಡಿದ್ದ ಹಫೀಝ್ ಭಾರತದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಪಿಸಿಬಿಯ ವೈದ್ಯಕೀಯ ಸಮಿತಿಯು ಹಫೀಝ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬಗ್ಗೆ ತೃಪ್ತಿ ಹೊಂದಿಲ್ಲ. ಮುಖ್ಯ ಆಯ್ಕೆಗಾರ ಇಂಝಮಾಮ್ ಉಲ್-ಹಕ್ ಹಾಗೂ ನಾಯಕ ಮಿಸ್ಬಾವುಲ್ ಹಕ್ ಅವರು ಹಫೀಝ್ ಫಿಟ್‌ನೆಸ್ ಕುರಿತು ಚಿಂತೆ ವ್ಯಕ್ತಪಡಿಸಿದ್ದು, ಹಫೀಝ್‌ಗೆ ವಿದೇಶದಲ್ಲಿ ಚಿಕಿತ್ಸೆ ನೀಡುವಂತೆ ಕ್ರಿಕೆಟ್ ಮಂಡಳಿಯನ್ನು ಒತ್ತಾಯಿಸಿದ್ದರು.
47 ಟೆಸ್ಟ್, 177 ಏಕದಿನ ಹಾಗೂ 77 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಹಫೀಝ್‌ರನ್ನು ಇಂಝಮಾಮ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕೆ ಪೂರ್ವಭಾವಿಯಾಗಿ ಲಾಹೋರ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ಕೌಶಲ ಶಿಬಿರಕ್ಕೆ ಆಯ್ಕೆ ಮಾಡಿದ್ದಾರೆ. ಹಫೀಝ್ ಆಯ್ಕೆಯು ಫಿಟ್‌ನೆಸ್ ವರದಿಯನ್ನು ಅವಲಂಬಿಸಿದೆ ಎಂದು ಮುಖ್ಯ ಆಯ್ಕೆಗಾರರು ಸ್ಪಷ್ಟಪಡಿಸಿದ್ದಾರೆ.





