ಗ್ರಾಪಂಗಳಲ್ಲೇ ಅಂಚೆ ಕಚೇರಿ: ಸಂಸದ ನಳಿನ್

ಮಂಗಳೂರು, ಮೇ 27: ಕೆಲವು ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಗಳಿಗೆ ಸೂಕ್ತವಾದ ಜಾಗವಿಲ್ಲ. ಇದಕ್ಕಾಗಿ ದ.ಕ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ನಲ್ಲಿಯೇ ಅಂಚೆ ಕಚೇರಿಗೆ ಒಂದು ವಿಭಾಗ ನೀಡುವ ಬಗ್ಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಲು ಪತ್ರ ಬರೆಯಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ಕುಲಶೇಖರ ಅಂಚೆ ಕಚೇರಿಯಲ್ಲಿ ಮಂಗಳೂರು ಪ್ರಾಂತ್ಯದ ಎರಡನೆ ಅಂಚೆ ಕಚೇರಿ ಎಟಿಎಂ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯತ್‌ನಲ್ಲೇ ಅಂಚೆ ಕಚೇರಿ ಸ್ಥಾಪನೆಯಾದಲ್ಲಿ ಜನರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಅಂಚೆ ಕಚೇರಿಯೇ ಪ್ರಮುಖ ವ್ಯವಹಾರ ಕೇಂದ್ರವಾಗಿ ರೂಪುಗೊಳ್ಳುವುದು ಮಾತ್ರವಲ್ಲದೆ, ಇ-ಮಾರ್ಕೆಟಿಂಗ್, ಬ್ಯಾಂಕಿಂಗ್, ಸಬ್ಸಿಡಿ, ಈ ಮಾರ್ಕೆಟಿಂಗ್ ಸಿಸ್ಟಂ ಅಳವಡಿಕೆಯಾಗಲಿದೆ ಎಂದವರು ಹೇಳಿದರು.
10 ಸಾವಿರ ಅಂಚೆ ಎಟಿಎಂ ಸ್ಥಾಪನೆಯ ಗುರಿ
ಪ್ರತಿ ಗ್ರಾಮಕ್ಕೊಂದು ಅಂಚೆ ಎಟಿಎಂ ಕೇಂದ್ರವನ್ನು ಸ್ಥಾಪನೆ ಮಾಡಿ ಆ ಮೂಲಕ ಗ್ರಾಮೀಣ ಜನರಿಗೆ ಬ್ಯಾಂಕಿಂಗ್ ಸಿಸ್ಟಂ, ಇ-ಮಾರ್ಕೆಟಿಂಗ್, ಸಬ್ಸಿಡಿ ವ್ಯವಹಾರ ಮತ್ತಷ್ಟು ಸುಲಭಗೊಳಿಸುವ ಉದ್ದೇಶ ಕೇಂದ್ರ ಸರಕಾರದ್ದು. ಪ್ರಥಮ ಹಂತವಾಗಿ ದೇಶಾದ್ಯಂತ 1ಸಾವಿರ ಎಟಿಎಂ ಕೇಂದ್ರ ಸ್ಥಾಪನೆ ಮಾಡಿದ್ದು, ಮುಂದೆ 10ಸಾವಿರ ಎಟಿಎಂ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ 3 ಹಾಗೂ ಉಡುಪಿ ಜಿಲ್ಲೆಗೆ 4 ಎಟಿಎಂ ಕೇಂದ್ರ ಮಂಜೂರುಗೊಂಡಿದೆ. ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಂಚೆ ಕಚೇರಿಗೆ ಪುನರುಜ್ಜೀವನ ಸಿಕ್ಕಿದ್ದು, ಪೋಸ್ಟಲ್ ಕ್ರಾಂತಿಯಾಗಿದೆ ಎಂದರು.
ಪುತ್ತೂರು ಡಿವಿಷನ್‌ನಲ್ಲಿ 22,739 ಮತ್ತು ಮಂಗಳೂರು ಡಿವಿಷನ್‌ನಲ್ಲಿ 25,448 ಗ್ರಾಹಕರು ಅಕೌಂಟ್ ಹೊಂದಿದ್ದಾರೆ. ಈಗಾಗಲೇ ಸುಕನ್ಯಾ ಸಮೃದ್ಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಪ್ರಧಾನ ಮಂತ್ರಿ ಭೀಮಾ ಜ್ಯೋತಿ ಸುರಕ್ಷಾ ಯೋಜನೆ, ಅಟಲ್ ಪೆನ್‌ಷನ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ಪರಿಣಾಮಕಾರಿಯಾಗಿ ಕಾರ್ಯಗತವಾಗಿವೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಶೀಘ್ರದಲ್ಲೇ ನಿವೃತ್ತಿಯಾಗಲಿರುವ ಪುತ್ತೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಟಿ.ಜಿ. ನಾಯಕ್‌ಗೆ ಅಭಿನಂದನೆ ಸಲ್ಲಿಸಲಾಯಿತು. ಅದೇ ರೀತಿ ಬಿಸಿನೆಸ್ ಅವಾರ್ಡ್ ಹಾಗೂ ವೆಸ್ಟರ್ ಯೂನಿಯನ್ ಎವಾರ್ಡ್ ಗಳಿಸಿದ ಮಂಗಳೂರು ಡಿವಿಷನ್‌ನ ಸಾಧನೆಯನ್ನು ಶ್ಲಾಸಿದರು.
ಮುಖ್ಯ ಅತಿಥಿಯಾಗಿ ಸುಂಕ ಮತ್ತು ಜಾರಿ ನಿರ್ದೇಶನಾಲಯ ನಿವೃತ್ತ ಕಮಿಷನರ್ ಜಾರ್ಜ್ ಪಿಂಟೋ, ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀೀಕ್ಷಕ ಜಗದೀಶ್ ಪೈ, ಪುತ್ತೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಟಿ.ಜಿ. ನಾಯಕ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉಪಸ್ಥಿತರಿದ್ದರು.







