ಕ್ರಿಕೆಟ್‌ನಿಂದ ರಾಜಕೀಯಕ್ಕೆ: ಹೊಸ ಇನಿಂಗ್ಸ್ ಆರಂಭಿಸಿದ ಲಕ್ಷ್ಮೀರತನ್ ಶುಕ್ಲಾ

ಕೋಲ್ಕತಾ, ಮೇ 27: ಕೇವಲ ಆರು ತಿಂಗಳ ಹಿಂದೆಯಷ್ಟೇ 18 ವರ್ಷಗಳ ದೇಶೀಯ ಕ್ರಿಕೆಟ್ ಬಾಳ್ವೆಗೆ ವಿದಾಯ ಹೇಳಿದ್ದ ಬಂಗಾಳದ ಮಾಜಿ ಕ್ರಿಕೆಟಿಗ ಲಕ್ಷ್ಮೀರತನ್ ಶುಕ್ಲಾ ಇತ್ತೀಚೆಗಷ್ಟೇ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾಗಿದ್ದರು.
ಮೊದಲ ಬಾರಿ ಬಂಗಾಳದ ಅಸೆಂಬ್ಲಿಗೆ ಪ್ರವೇಶ ಪಡೆದಿರುವ ಶುಕ್ಲಾ ಶುಕ್ರವಾರ ಇಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ 42 ಸಚಿವರನ್ನು ಒಳಗೊಂಡ ಹೊಸ ಸಂಪುಟಕ್ಕೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದರು. ಈ ಮೂಲಕ ಶುಕ್ಲಾ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಕ್ರಿಕೆಟ್ ಮೈದಾನದಿಂದ ನೇರವಾಗಿ ರಾಜಕೀಯ ಅಂಗಳಕ್ಕೆ ಧುಮುಕಿರುವ ಶುಕ್ಲಾ ಹೌರಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದರು. ತನ್ನ ಚೊಚ್ಚಲ ಅಸೆಂಬ್ಲಿ ಚುನಾವಣೆಯಲ್ಲಿ ಟಿಎಂಸಿಯ ಜನಪ್ರಿಯತೆಯ ಲಾಭ ಪಡೆದ ಶುಕ್ಲಾ ನಿಕಟ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್‌ನ ಸಂತೋಷ್ ಪಾಠಕ್ ಹಾಗೂ ಮಾಜಿ ಖ್ಯಾತ ನಟಿ, ಬಿಜೆಪಿಯ ರೂಪಾ ಗಂಗುಲಿಯನ್ನು ಮಣಿಸಿ ಗಮನ ಸೆಳೆದಿದ್ದರು. ಎಡರಂಗದ ಬೆಂಬಲ ಹೊಂದಿದ್ದ ಪಾಠಕ್‌ರನ್ನು ಶುಕ್ಲಾ 26,959 ಮತಗಳ ಅಂತರದಿಂದ ಮಣಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಗಳಿಸಲು ವಿಫಲವಾಗಿದ್ದ ಶುಕ್ಲಾ ರಾಜಕೀಯದ ಮೊದಲ ಪ್ರವೇಶದಲ್ಲೇ ಹೊಸ ಅಲೆ ಸೃಷ್ಟಿಸಿದ್ದಾರೆ. 35ರ ಹರೆಯದ ಶುಕ್ಲಾ ಡಿಸೆಂಬರ್ 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮೊದಲು 137 ಪ್ರಥಮ ದರ್ಜೆ ಪಂದ್ಯಗಳಲ್ಲಿ 6,217 ರನ್ ಹಾಗೂ 172 ವಿಕೆಟ್‌ಗಳನ್ನು ಉರುಳಿಸಿದ್ದರು. ಲೀಸ್ಟ್ ಎ ಪಂದ್ಯಗಳಲ್ಲಿ 2997 ರನ್ ಹಾಗೂ 143 ವಿಕೆಟ್ ಕಬಳಿಸಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಕ್ರಿಕೆಟ್ ತಂಡ ಉತ್ತಮ ಸಾಧನೆ ಮಾಡಲು ಶುಕ್ಲಾ ಮಹತ್ವದ ಕಾಣಿಕೆ ನೀಡಿದ್ದರು. 1989-90ರಲ್ಲಿ ಬಂಗಾಳ ಮೊದಲ ಬಾರಿ ರಣಜಿ ಟ್ರೋಫಿ ಜಯಿಸಿತ್ತು. ಅದೇ ವರ್ಷ ಮುಂಬೈ ವಿರುದ್ಧ ವಿಜಯ್ ಹಝಾರೆ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಶುಕ್ಲಾ ಬಂಗಾಳ ಟ್ರೋಫಿ ಜಯಿಸಲು ನೆರವಾಗಿದ್ದರು. ಈ ಸಾಹಸಕ್ಕೆ ಆ ವರ್ಷ ಶ್ರೇಷ್ಠ ಆಲ್‌ರೌಂಡರ್‌ಗೆ ನೀಡಲ್ಪಡುವ ಲಾಲಾ ಅಮರನಾಥ್ ಅವಾರ್ಡ್‌ನ್ನು ಸ್ವೀಕರಿಸಿದ್ದರು.







