ಉಳ್ಳಾಲ: ಹುಬ್ಬಳ್ಳಿ ಮೂಲದ ವ್ಯಕ್ತಿ ಸಮುದ್ರಪಾಲು

ಉಳ್ಳಾಲ, ಮೇ 27: ಕುಟುಂಬದೊಂದಿಗೆ ಹುಬ್ಬಳ್ಳಿಯಿಂದ ರಜಾದಿನಗಳನ್ನು ಕಳೆಯಲು ಉಳ್ಳಾಲಕ್ಕೆ ಬಂದ ವ್ಯಕ್ತಿಯೋರ್ವರು ಸಮುದ್ರಕಿನಾರೆಯಲ್ಲಿ ಕೌಟುಂಬಿಕರೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಹುಬ್ಬಳ್ಳಿಯ ಗೋಕುಲ್ ದಾಸ್ ರೋಡ್‌ನ ನಿವಾಸಿ ವಿನೋದ್ ಪೋತುಗೋಳಿ(41) ಎಂದು ಗುರುತಿಸಲಾಗಿದೆ.
ವಿನೋದ್ ತನ್ನ ತಾಯಿ ಚಿನ್ನಮ್ಮ, ಚಿಕ್ಕಮ್ಮ ಎಲಿಝಬೆತ್ ಅವರ ಮಗ ಆನಂದ್, ಪತ್ನಿ ಶೀಲಾ ಮತ್ತು ಮಗಳು ರೆಬೆಕ್ (8)ಜೊತೆ ಹುಬ್ಬಳ್ಳಿಯಿಂದ ಮಂಗಳೂರಿಗೆ ಬಂದಿದ್ದರು. ಮಂಗಳೂರು ತಾಲೂಕಿನ ಕಿನ್ಯ ಗ್ರಾಮದ ಒಳವಿನ ಹಳ್ಳಿಯಲ್ಲಿ ವಾಸವಾಗಿರುವ ವಿನೋದ್‌ರ ಪತ್ನಿ ಶೀಲಾರ ತಂಗಿ ವಿಮಲಾರ ಮನೆಗೆ ರಾತ್ರಿ ತಲುಪಿದ್ದರು. ಶುಕ್ರವಾರ ಮಧ್ಯಾಹ್ನದವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆದು, ಮಧ್ಯಾಹ್ನದ ನಂತರ ವಿನೋದ್, ಚಿನ್ನಮ್ಮ, ಎಲಿಝಬೆತ್, ಆನಂದ್, ಶೀಲಾ, ರೆಬೆಕ್ ಮತ್ತು ವಿಮಲಾರ ಮಕ್ಕಳಾದ ಆಲಿಸ್ಟರ್ ಮತ್ತು ಟ್ರಿಸಾ ಸೇರಿ ಕಾರಿನಲ್ಲಿ ಉಳ್ಳಾಲ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಹೊರಟಿದ್ದರು.
ಉಳ್ಳಾಲದ ಸಮುದ್ರವು ಆಳವಾಗಿದ್ದು ಇಲ್ಲಿನ ಪ್ರಕ್ಷುಬ್ದತೆ ಬಗ್ಗೆ ಸ್ಥಳೀಯ ಈಜು ರಕ್ಷಕರು ಇವರಿಗೆ ಎಚ್ಚರಿಸಿದ್ದರೂ ಅವರ ಕಣ್ಣು ತಪ್ಪಿಸಿ ದೂರ ತೆರಳಿದ್ದ ವಿನೋದ್, ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ಹಿಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ನೀರಿಗಿಳಿದಿದ್ದರು. ಈ ವೇಳೆ ಸಮುದ್ರದ ದೈತ್ಯಗಾತ್ರದ ಅಲೆಗಳು ಅವರನ್ನು ಕೊಚ್ಚಿಕೊಂಡು ಹೋಗಿತ್ತು. ಕೂಡಲೇ ಸ್ಥಳೀಯ ಶಿವಾಜಿ ಈಜು ರಕ್ಷಕ ದಳದವರು ಸಮುದ್ರಕ್ಕೆ ಜಿಗಿದು ಹಗ್ಗದ ಮುಖೇನ ವಿನೋದ್ ದೇಹವನ್ನು ಮೇಲಕ್ಕೆಳೆದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತ ವಿನೋದ್ ಹುಬ್ಬಳ್ಳಿಯ ಕೆಎಸ್ಸಾರ್ಟಿಸಿ ಡಿಪೋ ಸೆಕ್ಯುರಿಟಿಯಾಗಿದ್ದರು. ವಿನೋದ್ ಪತ್ನಿ ಶೀಲಾ ನೀಡಿದ ದೂರಿನನ್ವಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







