ನಾಪತ್ತೆಯಾಗಿದ್ದ 2ನೆ ಮಹಾಯುದ್ಧ ಕಾಲದ ಬ್ರಿಟಿಶ್ ಸಬ್‌ಮರೀನ್ ಪತ್ತೆ

ಲಂಡನ್, ಮೇ 27: 73 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎರಡನೆ ಮಹಾಯುದ್ಧ ಕಾಲದ ಬ್ರಿಟಿಶ್ ಸಬ್‌ಮರೀನ್ ಅದರ 71 ಸಿಬ್ಬಂದಿಯ ಮೃತದೇಹಗಳೊಂದಿಗೆ ಇಟಲಿ ಸಮುದ್ರದಲ್ಲಿ ಪತ್ತೆಯಾಗಿದೆ.
ಮುಳುಗುಗಾರರ ತಂಡವೊಂದು ಸರ್ಡೀನಿಯದ ಈಶಾನ್ಯ ಕರಾವಳಿಯಾಚೆಗಿನ ಟವೊಲರ ದ್ವೀಪದ ಸಮೀಪದಲ್ಲಿ 100 ಮೀಟರ್ ಆಳದಲ್ಲಿ 1,290 ಟನ್ ಸಬ್‌ಮರೀನನ್ನು ಪತ್ತೆಹಚ್ಚಿದೆ.
ಸಬ್‌ಮರೀನ್ 1943 ಜನವರಿ 2ರಂದು ಯಾವುದೇ ಕುರುಹು ಇಲ್ಲದಂತೆ ಮಾಯವಾಗಿತ್ತು. ಅದಕ್ಕೆ ಒಲ್ಬಿಯ ಕೊಲ್ಲಿಯಲ್ಲಿ ನೆಲಬಾಂಬ್ ಬಡಿದಿರಬೇಕೆಂದು ಶಂಕಿಸಲಾಗಿತ್ತು.
ಇಟಲಿಯ ಎರಡು ಯುದ್ಧ ನೌಕೆಗಳು ಲಾ ಮಡಲೇನ ಬಂದರಿನಲ್ಲಿ ಲಂಗರು ಹಾಕುವಾಗ ಅವುಗಳನ್ನು ನಾಶಪಡಿಸುವ ಯೋಜನೆಯೊಂದಿಗೆ ಸಬ್‌ಮರೀನ್ 1942 ಡಿಸೆಂಬರ್ 28ರಂದು ಮಾಲ್ಟದಿಂದ ಹೊರಟಿತ್ತು.
ಆದರೆ, ಡಿಸೆಂಬರ್ 31ರಂದು ಸಂದೇಶವೊಂದನ್ನು ಕಳುಹಿಸಿದ ಬಳಿಕ ಅದು ಸುಳಿವೇ ಇಲ್ಲದಂತೆ ನಾಪತ್ತೆಯಾಗಿತ್ತು. ಸಬ್‌ಮರೀನ್ ಮುಳುಗಿದೆ ಎಂಬುದಾಗಿ ಸೇನಾಧಿಕಾರಿಗಳು ಭಾವಿಸಿದ್ದರು ಎಂದು ‘ಡೇಲಿ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
Next Story





