ಸುಬ್ರಹ್ಮಣ್ಯ: ಕಾಡಾನೆ ದಾಳಿಗೆ ಯುವಕ ಮೃತ್ಯು; ಓರ್ವ ಗಂಭೀರ

ಸುಬ್ರಹ್ಮಣ್ಯ, ಮೇ 27: ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ-ಬಿಸಿಲೆ ರಸ್ತೆಯಲ್ಲಿ ದ್ವಿಚಕ್ರ ವಾಹದಲ್ಲಿ ತೆರಳುತ್ತಿದ್ದ ವ್ಯಕ್ತಿಗಳಿಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಸಹಸವಾರ ಮೃತಪಟ್ಟು ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಕಲೇಶಪುರ ಮೀಸಲು ಅರಣ್ಯದ ಮುಂಗುಳಿಪಾದೆ ಎಂಬಲ್ಲಿ ನಡೆದಿದೆ.
ಹಾಸನ ಮೂಲದ ಗಣೇಶ್ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಹಾಸನದ ಸುನೀಲ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಸುಬ್ರಹ್ಮಣ್ಯ ಬಿಸಿಲೆ ರಸ್ತೆಯಲ್ಲಿ ಮುಂಜಾನೆ ಸುಮಾರು 7:30ರ ಸುಮಾರಿಗೆ ಈ ರಸ್ತೆಯಲ್ಲಿರುವ ದೇವಿಗುಡಿ ಕಡೆಗೆ ತೆರಳುತ್ತಿದ್ದ ವೇಳೆ ಕುಲ್ಕುಂದದಿಂದ 6 ಕಿ.ಮೀ. ದೂರದಲ್ಲಿರುವ ಮುಂಗುಳಿಪಾದೆ ಬಳಿ ತಿರುವಿನಲ್ಲಿ ಮಾರ್ಗಮಧ್ಯೆ ಕಾಡಾನೆ ಪ್ರತ್ಯಕ್ಷವಾಗಿದೆ. ಆನೆ ಹಸಿರು ಬಳ್ಳಿಯನ್ನು ಎಳೆದು ತಿನ್ನುತ್ತಿದ್ದು, ಬೈಕ್‌ನಲ್ಲಿದ್ದ ಗಣೇಶ್ ಹಾಗೂ ಸುನೀಲ್ ಗಮನಕ್ಕೆ ಬಾರದೆ ಕಾಡಾನೆ ಸಮೀಪಕ್ಕೆ ಹೋಗಿದ್ದಾರೆ. ಆ ವೇಳೆ ಬೈಕ್ ಚಲಾಯಿಸುತ್ತಿದ್ದ ಸುನಿಲ್ ಬೈಕ್ ತಿರುಗಿಸಲು ಮುಂದಾದಾಗ ಬೈಕ್ ಸ್ಕಿಡ್ ಆಗಿ ಇಬ್ಬರು ರೋಡಿಗೆ ಬಿದ್ದಿದ್ದಾರೆ.
ಈ ವೇಳೆ ಕಾಡಾನೆ ಸುನಿಲ್‌ಗೆ ತುಳಿದು ಬಳಿಕ ಗಣೇಶರನ್ನು ರಸ್ತೆಯಲ್ಲಿ ಓಡಿಸಿಕೊಂಡು ಹೋಗಿ ದಾಳಿ ಮಾಡಿ ಕೊಂದು ಹಾಕಿದೆ. ಸುಮಾರು ಅರ್ಧತಾಸಿನ ಬಳಿಕ ಪೂಜೆಗಾಗಿ ಹೋದವರು ಇವರನ್ನು ನೋಡಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಆಂಬ್ಯುಲೆನ್ಸ್ ಬರುವ ವೇಳೆಗೆ ಗಣೇಶ್ ಸಾವನ್ನಪ್ಪಿದ್ದರು. ಬಳಿಕ ಸುನಿಲ್‌ನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯಲ್ಲಿ ಮೃತಪಟ್ಟ ಗಣೇಶ್ ಹಾಸನದ ಶಂಕರನಹಳ್ಳಿ ಪಕ್ಕದ ಕಟ್ಟ ಹೊಸಹಳ್ಳಿ ನಿವಾಸಿ. ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಸುನಿಲ್ ಹಾಸನದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಗಣೇಶ್ ಅವಿವಾಹಿತರಾಗಿದ್ದು, ಜಯರಾಮ ಮತ್ತು ಲೋಲಾಕ್ಷಿ ಎಂಬವರ ಸಾಕುಪುತ್ರರಾಗಿದ್ದರು.
ಸ್ಥಳಕ್ಕೆ ಮಂಗಳೂರು ಉಪಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪ, ಎಸಿಎಫ್ ಜಗನ್ನಾಥ್, ಸುಳ್ಯ ತಹಶೀಲ್ದಾರ್ ಅನಂತ್ ಶಂಕರ್ ಭೇಟಿ ನೀಡಿದ್ದಾರೆ. ಸುಬ್ರಹ್ಮಣ್ಯ ಠಾಣಾಧಿಕಾರಿ ಐತುನಾಯ್ಕ ಕೇಸು ದಾಖಲಿಸಿಕೊಂಡಿದ್ದಾರೆ. ವೈಧ್ಯಾಧಿಕಾರಿ ತ್ರಿಮೂರ್ತಿ ಶವದ ಮಹಜರು ಮಹಜರು ನಡೆಸಿದ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಮೃತಪಟ್ಟ ಗಣೇಶ್‌ರ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.







