‘ಒಲಿಂಪಿಕ್ಸ್‌ಗೆ ಸುಶೀಲ್‌ಗಿಂತ ಯಾದವ್ ಉತ್ತಮ ಅಭ್ಯರ್ಥಿ’
ದಿಲ್ಲಿ ಹೈಕೋರ್ಟ್‌ಗೆ ಕುಸ್ತಿ ಒಕ್ಕೂಟ ಮನವರಿಕೆ

ಹೊಸದಿಲ್ಲಿ, ಮೇ 27: ರಿಯೋ ಒಲಿಂಪಿಕ್ ಗೇಮ್ಸ್‌ನ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್‌ಗಿಂತಲೂ ನರಸಿಂಗ್ ಯಾದವ್ ಉತ್ತಮ ಅಭ್ಯರ್ಥಿಯಾಗಿದ್ದಾರೆ ಎಂದು ದಿಲ್ಲಿ ಹೈಕೋರ್ಟ್‌ಗೆ ಭಾರತದ ಕುಸ್ತಿ ಒಕ್ಕೂಟ( ಡಬ್ಲುಐಎಫ್ ) ಶುಕ್ರವಾರ ತಿಳಿಸಿದೆ.
2015ರಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸುವುದರೊಂದಿಗೆ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡಿರುವ ಯಾದವ್ ‘ಅತ್ಯಂತ ಸೂಕ್ತ ಕುಸ್ತಿಪಟು’ ಹಾಗೂ ಸುಶೀಲ್‌ಗೆ ಹೋಲಿಸಿದರೆ ಉತ್ತಮ ಅಭ್ಯರ್ಥಿ. ಸುಶೀಲ್ ಕಳೆದೆರಡು ವರ್ಷಗಳಿಂದ ಆಯ್ಕೆ ಟ್ರಯಲ್ಸ್‌ನಿಂದ ಹೊರಗುಳಿದಿದ್ದರು ಎಂದು ಡಬ್ಲುಐಎಫ್ ತಿಳಿಸಿದೆ.
ಒಲಿಂಪಿಕ್ಸ್‌ನಲ್ಲಿ 74ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಟ್ರಯಲ್ಸ್ ನಡೆಸಬೇಕೆಂಬ ಸುಶೀಲ್ ಬೇಡಿಕೆಯನ್ನು ಕುಸ್ತಿ ಒಕ್ಕೂಟ ಈ ತನಕ ಪರಿಗಣಿಸಿಲ್ಲ. ಶ್ರೀಮಂತ ಲೀಗ್ ಪ್ರೊ-ಕುಸ್ತಿ ಲೀಗ್‌ನಲ್ಲಿ ಸುಶೀಲ್ ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ಡಬ್ಲ್ಯುಎಫ್‌ಐ ಟ್ರಯಲ್ಸ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಸುಶೀಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ಸಿಬಾಲ್ ಜಸ್ಟಿಸ್ ಮನ್‌ಮೋಹನ್‌ಗೆ ತಿಳಿಸಿದರು.
ಮುಂಬರುವ ಒಲಿಂಪಿಕ್ಸ್‌ನಲ್ಲಿ 5ನೆ ಕ್ರಮಾಂಕದ ಕುಸ್ತಿಪಟು(ಯಾದವ್) ಭಾರತವನ್ನು ಪ್ರತಿನಿಧಿಸಲು ಯೋಗ್ಯ ಅಭ್ಯರ್ಥಿಯೆಂದು ಪರಿಗಣಿಸಲಾಗಿದೆ. ಸಂಪೂರ್ಣ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಅರ್ಜಿದಾರರು ಆಪಾದಿಸಿರುವಂತೆ ಯಾವುದೇ ತಾರತಮ್ಯ, ಲಾಬಿ, ವಂಚನೆ ಮಾಡಿಲ್ಲ. ಸುಶೀಲ್ ಬೇಡಿಕೆಯಂತೆ ಟ್ರಯಲ್ಸ್ ನಡೆಸಿದರೆ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಬೆಲೆ ಇಲ್ಲವಾಗುತ್ತದೆ ಎಂದು ಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಡಬ್ಲುಐಎಫ್ ತಿಳಿಸಿದೆ.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಮೇ 30ಕ್ಕೆ ವಿಚಾರಣೆ ಮುಂದೂಡಿತು. ಶನಿವಾರ ಸಂಕ್ಷಿಪ್ತ ಲಿಖಿತ ಸಾರಾಂಶವನ್ನು ಸಲ್ಲಿಸುವಂತೆ ಡಬ್ಲುಎಫ್‌ಐ ಹಾಗೂ ಯಾದವ್‌ರ ವಕೀಲರಿಗೆ ತಿಳಿಸಿತು.







