ನಿಧಾನಗತಿಯ ರಸ್ತೆ ಕಾಮಗಾರಿ

ಮಡಿಕೇರಿ, ಮೇ 27: ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಅಡಚಣೆ ಉಂಟಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂತೆ ದಿನವಾದ ಶುಕ್ರವಾರವಂತೂ ವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ವಾಹನ ಸಂಚಾರ ಅಸ್ತವ್ಯಸ್ತಗೊಂಡು ಆಮೆ ನಡಿಗೆಯ ಕಾಮಗಾರಿ ವಿರುದ್ಧ ಆಟೊ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂತೆ ಸಾಮಗ್ರಿಗಳನ್ನು ಕೊಂಡೊಯ್ಯಲು ರಸ್ತೆ ಸಂಪರ್ಕವಿಲ್ಲದೆ ವ್ಯಾಪಾರಿಗಳು ಪರದಾಡಿದರು. ವಾಹನದಟ್ಟಣೆಯಿಂದ ಪಾದಚಾರಿಗಳಿಗೆ ಕಿರಿಕಿರಿ ಎನಿಸಿತು. ಒಳ ಚರಂಡಿ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ ಕಾರ್ಯ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಈ ಬಗ್ಗೆ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹೈಟೆಕ್ ಹಣೆಪಟ್ಟಿಯ ಮಾರುಕಟ್ಟೆ ಕಾಮಗಾರಿ ಕೂಡ ಅಪೂರ್ಣಗೊಂಡಿದ್ದು, ಸಂತೆ ವ್ಯಾಪಾರಿಗಳು ಅತಂತ್ರ ಸ್ಥಿತಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇಕ್ಕಟ್ಟಾದ ಜಾಗದಲ್ಲಿ ಗ್ರಾಹಕರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲ ಸಮೀಪಿಸುತ್ತಿದ್ದು, ಮಹದೇವಪೇಟೆ ರಸ್ತೆ ಕಾಮಗಾರಿ ಮತ್ತು ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದಲ್ಲಿ ಮತ್ತಷ್ಟು ಅವ್ಯವಸ್ಥೆಗಳು ಎದುರಾಗಿ ಸಾರ್ವಜನಿಕರು ಹಾಗೂ ವರ್ತಕರು ಸಾಕಷ್ಟು ಕಷ್ಟ-ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದೆಂದು ಸ್ಥಳೀಯರು ನಗರಸಭೆಯ ಗಮನ ಸೆಳೆದಿದ್ದಾರೆ.







