ಹೊಸ ಕೈಗಾರಿಕೆ ಸ್ಥಾಪನೆಗೆ ಸರಕಾರ ಬದ್ಧ: ಸಚಿವ ಜಾರಕಿಹೊಳಿ
ಕೂಡ್ಲೂರು ಕೈಗಾರಿಕಾ ಪ್ರದೇಶ ಪರಿಶೀಲನೆ

ಕುಶಾಲನಗರ , ಮೇ 27: ರಾಜ್ಯದಲ್ಲಿ ಮತ್ತಷ್ಟು ಹೊಸ ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರ ಅಗತ್ಯ ಕ್ರಮಗಳನ್ನು ಕೈಕೊಂಡಿದೆ ಎಂದು ಸಣ್ಣ ಕೈಗಾರಿಕಾ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಅವರು, ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಅವ್ಯವಸ್ಥೆಗಳ ಬಗ್ಗೆ ಇಲ್ಲಿನ ಉದ್ದಿಮೆದಾರರ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್ ಸಚಿವರ ಗಮನ ಸೆಳೆದರು. ಉದ್ದಿಮೆಗಳಿಗೆ 25 ವರ್ಷಗಳ ಹಿಂದೆಯೇ ಭೂಮಿ ನೀಡಲಾಗಿದೆ. ಸೇಲ್‌ಡೀಡ್ ಕೂಡ ಆಗಿದೆ. ಆದರೆ ಇನ್ನೂ ಕೂಡ ಖಾತೆ ಮಾಡಿಕೊಡಲಾಗಿಲ್ಲ. 10 ಲಕ್ಷ ರೂ. ಒಳಗಿನ ಕೈಗಾರಿಕೆಗಳಿಗೆ ಸಿಗಬೇಕಿರುವ ಸಬ್ಸಿಡಿಯೂ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.
ಒಂದು ಆಸ್ಪತ್ರೆ, ಪೊಲೀಸ್ ಠಾಣೆ ಬೇಕು ಎನ್ನುವ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ರಸ್ತೆ, ವಿದ್ಯುತ್ ದೀಪಗಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. 45ಕ್ಕೂ ಹೆಚ್ಚು ಕಾಫಿ ಸಂಸ್ಕರಣಾ ಘಟಕಗಳಿದ್ದು, ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಒಂದೇ ಒಂದು ಸಾರ್ವಜನಿಕ ಶೌಚಗೃಹ ಇಲ್ಲ. ಸರಕಾರಕ್ಕೆ ತೆರಿಗೆ ಕಟ್ಟುವುದರೊಂದಿಗೆ ಸ್ಥಳೀಯ ಪಂಚಾಯತ್‌ಗೂ ತೆರಿಗೆ ಕಟ್ಟಬೇಕಿದೆ ಎಂದು ಸಚಿವರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತೆರಿಗೆ ವಿಷಯ ಗೊಂದಲದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಏಕರೂಪದ ತೆರಿಗೆ ಪದ್ಧತಿ ಜಾರಿಗೆ ಸರಕಾರ ಚಿಂತಿಸಿದೆ. ಈ ಸಂಬಂಧ ಚರ್ಚೆಗಾಗಿ ಮುಖ್ಯಮಂತ್ರಿಯವರು ಸದ್ಯದಲ್ಲೇ ಸಭೆ ಕರೆಯಲಿದ್ದಾರೆ. 2013-14ರ ತನಕದ ಸಬ್ಸಿಡಿ ನೀಡಲಾಗಿದೆ. ಸಬ್ಸಿಡಿಗೆ ಕನಿಷ್ಠ 2 ವರ್ಷಗಳು ಹಿಡಿಯುವುದರಿಂದ ಉಳಿದ ಸಬ್ಸಿಡಿ ಕೊಡಲು ಕ್ರಮ ತೆಗೆದುಕೊಳ್ಳಲಾಗುವುದು. ಕೈಗಾರಿಕಾ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನಿಡಿದರು.
ಕೂಡ್ಲೂರು ಉದ್ದಿಮೆದಾರರ ಸಂಘದ ನಿರ್ದೇಶಕ ಕೆ. ವರದ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಕೆ.ಎಸ್.ಐ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ರಂಗನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಚೌಡಯ್ಯ ಈ ವೇಳೆ ಉಪಸ್ಥಿತರಿದ್ದರು.
=ಇಲ್ಲಿರುವ ಬಹುತೇಕ ಕಾಫಿ ಸಂಸ್ಕರಣಾ ಘಟಕಗಳು ರಫ್ತು ವ್ಯವಹಾರ ಮಾಡುತ್ತವೆ. ಇಲ್ಲಿ ವಾರ್ಷಿಕ ನಾಲ್ಕೂವರೆ ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಯುತ್ತದೆ. ಸರಕಾರಕ್ಕೆ ಸಾಕಷ್ಟು ತೆರಿಗೆಯನ್ನೂ ಪಾವತಿಲಾಗುತ್ತಿದೆ. ಆದರೆ ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನೇ ಕಲ್ಪಿಸಲಾಗಿಲ್ಲ. ಕೈಗಾರಿಕಾ ಬಡಾವಣೆಯ ರಸ್ತೆಗಳು ಎತ್ತಿನ ಗಾಡಿ ಓಡಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿವೆ.ಸುದೀಪ್ ಕುಮಾರ್, ಕೈಗಾರಿಕೋದ್ಯಮಿ





