ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ
ಮಾಜಿ ತಾಪಂ ಸದಸ್ಯರ ಬೀಳ್ಕೊಡುಗೆ ಸಮಾರಂಭ

ಕಡೂರು, ಮೇ 27: ತಾಲೂಕಿನಾದ್ಯಂತ ಭೀಕರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಜನರು ಕೆಲಸಗಳಿಗಾಗಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಸ್ಪಂದಿಸಿಬೇಕಿದೆ ಎಂದು ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್ ತಿಳಿಸಿದ್ದಾರೆ.
ತಾಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾಜಿ ತಾಪಂ ಸದಸ್ಯರುಗಳಿಗೆ ಬೀಳ್ಕೊಡುಗೆ, ನೂತನವಾಗಿ ತಾಪಂ ಗೆ ಸದಸ್ಯರಾಗಿ ಆಯ್ಕೆಗೊಂಡಿರುವವರ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ 5ವರ್ಷಗಳಿಂದ ತಾಪಂ ಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಪಡಿಸಿ ಉತ್ತಮ ಕಾರ್ಯ ನಿರ್ವಹಿಸಿದ್ದು,ಮಾಜಿ ಸದಸ್ಯರುಗಳ ಅನುಭವ ತಮಗೆ ಬೇಕಿದೆ. ನೂತನವಾಗಿ ಆಯ್ಕೆಗೊಂಡಿರುವ ಎಲ್ಲ ಸದಸ್ಯರಗಳನ್ನು ಪಕ್ಷಾತೀತವಾಗಿ ಒಮ್ಮತಕ್ಕೆ ತೆಗೆದುಕೊಂಡು ಸರಕಾರದ ಸವಲತ್ತನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕಿದೆ. ಇಲಾಖೆಗಳಲ್ಲಿ ಇರುವ ಸವಲತ್ತುಗಳ ಮಾಹಿತಿಯನ್ನು ನೂತನ ಸದಸ್ಯರಿಗೆ ತಿಳಿಸುವ ಕೆಲಸ ಮಾಡಬೇಕಿದ್ದು, ತಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡದೆ ಉತ್ತಮ ಕಾರ್ಯ ನಿರ್ವಹಿಸಲಾಗುವುದು ಎಂದರು. ತಾಪಂ ಉಪಾಧ್ಯಕ್ಷ ರುದ್ರಮೂರ್ತಿ ಮಾತನಾಡಿ, ಹಿಂದಿನ ಸದಸ್ಯರುಗಳ ಅನುಭವದ ಮಾತುಗಳು ಇಂದಿನ ಸದಸ್ಯರಿಗೆ ಸ್ಫೂರ್ತಿ ತಂದಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ತಿಳಿಸಲು ತಾಪಂ ಒಂದು ವೇದಿಕೆಯಾಗಿದೆ. ಪ್ರತಿಯೊಬ್ಬ ಸದಸ್ಯರು ಪ್ರಾಮಾಣಿಕವಾಗಿ ಜನರ ಸೇವೆಯಲ್ಲಿ ತೊಡಗಿ ಅಧಿಕಾರಿಗಳು ಸಹಕಾರದೊಂದಿಗೆ ಇಲಾಖೆಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ 5ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ವಿಷಯದಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಗ್ಗಟ್ಟಾಗಿ ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಪಡಿಸಲಾಗಿದೆ ಎಂದರು. ತಾಪಂ ಮಾಜಿ ಅಧ್ಯಕ್ಷೆ ಎ.ಇ.ರತ್ನ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಖುದ್ದು ಹಾಜರಿದ್ದು, ತಮ್ಮ ಪರಿಚಯದೊಂದಿಗೆ ಇಲಾಖೆಯಿಂದ ಬರುವ ಯೋಜನೆಗಳು, ಕ್ಷೇತ್ರಕ್ಕೆ ತಲುಪಬೇಕಾದ ಅನುದಾನದ ಬಗ್ಗೆ ವೈಯಕ್ತಿಕ ಫಲಾನುಭವಿಗಳ ಬಗ್ಗೆ ವಿವರ ನೀಡಿದರು. ಈ ಸಂದಭರ್ದಲ್ಲಿ ತಾಪಂ ಇಒ ಗೋಪಾಲಕೃಷ್ಣ, ಮಾಜಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.







