ಪೊಲೀಸರ ಬೇಡಿಕೆಗಳ ಈಡೇರಿಕೆಗೆ ಕರವೇ ಒತ್ತಾಯ

ಚಿಕ್ಕಮಗಳೂರು, ಮೇ 27: ಸದಾಕಾಲ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ಇತರ ರಾಜ್ಯಗಳಂತೆ ನಮ್ಮ ನಾಡಿನಲ್ಲೂ ಉತ್ತಮ ವಸತಿ ವ್ಯವಸ್ಥೆ, ವೇತನ ಹೆಚ್ಚಳ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸಂತೋಷ್ ಬಾಬುರವರನ್ನು ಶುಕ್ರವಾರ ಭೇಟಿ ಮಾಡಿದ ಕಾರ್ಯಕರ್ತರು ಪೊಲೀಸ್‌ರ ಹೋರಾಟಕ್ಕೆ ಬೆಂಬಲ ಸೂಚಿಸಿ ಮನವಿ ಪತ್ರ ನೀಡಿದರು. ಕರ್ನಾಟಕದ ಪೊಲೀಸ್ ಇಲಾಖೆ ತನ್ನ ಕಾರ್ಯದಕ್ಷತೆಯಿಂದಾಗಿ ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ಹೊಂದಿದ್ದು, ಇದಕ್ಕೆ ಪೊಲೀಸ್ ಸಿಬ್ಬಂದಿಯ ಅವಿರತ ಶ್ರಮ ಮೂಲ ಕಾರಣವಾಗಿದೆ. ಹಗಲು ರಾತ್ರಿ ಎನ್ನದೇ ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿರುವ ನಾಡಿನ ಪೊಲೀಸರಿಗೆ ಇತರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಸೂಕ್ತ ಮೂಲಭೂತ ಸೌಲಭ್ಯ ಒದಗಿಸದಿರುವುದು ವಿಷಾದದ ಸಂಗತಿಯಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕೆ ಮುಂದಾಗಿರುವ ಪೊಲೀಸರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರಗಿಸದೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪೊಲೀಸರ ಹೋರಾಟಕ್ಕೆ ರಕ್ಷಣಾ ವೇದಿಕೆ ಕೈಜೋಡಿಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ವಕ್ತಾರ ಕೋಟೆ ಸೋಮಣ್ಣ, ತಾಲೂಕು ಅಧ್ಯಕ್ಷ ಮನೋಜ್ ಶೆಟ್ಟಿ, ನಗರ ಕಾರ್ಯದರ್ಶಿ ಭರತ್‌ರಾಜ್, ಉಪಾಧ್ಯಕ್ಷ ಇರ್ಷಾದ್ ಅಹ್ಮದ್, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ನಾಗಲತಾ ಮತ್ತಿತರರು ಉಪಸ್ಥಿತರಿದ್ದರು.





