ನಕ್ಸಲ್‌ಬಾರಿ ಎಂದರೆ ಕೇವಲ ಸಶಸ್ತ್ರ ಹೋರಾಟವಲ್ಲ: ಮಾನಸಯ್ಯ

ಚಿಕ್ಕಮಗಳೂರು, ಮೇ 27: ನಕ್ಸಲ್‌ಬಾರಿ ಎಂದರೆ ಕೇವಲ ಸಶಸ್ತ್ರ ಹೋರಾಟವಲ್ಲ. ರೈತ ಕಾರ್ಮಿಕರ ಒಂದು ದೊಡ್ಡ ಸಮೂಹ ದಂಗೆಯಾಗಿದ್ದು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿರುದ್ಧದ ಹೋರಾಟವಾಗಿದೆ ಎಂದು ಸಿಪಿಐ(ಎಂಎಲ್) ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯರಾದ ಆರ್.ಮಾನಸಯ್ಯ ತಿಳಿಸಿದರು.
ಆಲ್ದೂರಿನ ಅಂಬೇಡ್ಕರ್ ಭವನದಲ್ಲಿ ಸಿಪಿಐ(ಎಂಎಲ್) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ನಕ್ಸಲ್ಬರಿ ರೈತ ದಂಗೆಯ 50ನೆಯ ವರ್ಷಾಚರಣೆಯ ಅಂಗವಾಗಿ ನಡೆಸಿದ ನಕ್ಸಲ್‌ಬಾರಿ ಬಂಡಾಯದ ರಾಜಕೀಯ ಪ್ರಾಮುಖ್ಯತೆ ಕುರಿತು ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿ ಮಾತನಾಡಿದರು. ದೊಡ್ಡ ಬಂಡವಾಳಿಗರ, ದೊಡ್ಡ ಭೂಮಾಲಿಕರ ವಿರುದ್ಧ ಹೋರಾಟ ಮಾಡಿ ಊಳುವವನೇ ಭೂ ಒಡೆಯ ಎಂಬ ಘೋಷಣೆ ಜಾರಿಗಾಗಿ ನಡೆಸಿದ ಹೋರಾಟವಾಗಿದೆ. ನಕ್ಸಲ್‌ಬಾರಿ ರಾಜಕೀಯ ಎಂದರೆ ಮಾರ್ಕ್ಸ್‌ವಾದಿ, ಲೆನಿನ್‌ವಾದಿ, ಮಾವೋ ವಿಚಾರಧಾರೆಯ ರಾಜಕೀಯವಾಗಿದೆ. ಭೂಮಿಯ ಹಕ್ಕಿಗಾಗಿ ಸುದೀರ್ಘ ಕಾಲ ಹೋರಾಡಿರುವ ನಕ್ಸಲ್‌ಬಾರಿರೈತ ದಂಗೆಯಾಗಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಧಿಕಾರ ಹಿಡಿದ ಯಾವುದೇ ಪಕ್ಷಗಳಿಗೆ ಭೂಮಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಹಾಗೂ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದ ಸಿಪಿಐ, ಸಿಪಿಐ(ಎಂ) ಪಕ್ಷಗಳು ಜನರು ನಿರೀಕ್ಷೆಪಟ್ಟಂತೆ ಭೂ ಹಂಚಿಕೆಯ ಬೇಡಿಕೆಯನ್ನು ಈಡೇರಿಸಲು ಮತ್ತು ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಿಲ್ಲ ಎಂದರು.
ದುಡಿಯುವ ವರ್ಗದ ಜನರಿಗೆ ಭೂಮಿ ಮತ್ತು ಅಧಿಕಾರ ಇನ್ನೂ ಸಿಗಲು ಸಾಧ್ಯವಾಗಿಲ್ಲ. ಉಳುಮೆ ಮಾಡುವವರಿಗೆ ಭೂಮಿ ನೀಡುವಂತಹ ಕಾರ್ಯಕ್ರಮಗಳು ಜಾರಿಯಾಗದೇ ಬಂಡವಾಳ ಹೂಡುವವರಿಗೆ ಭೂಮಿ ನೀಡಲಾಗುತ್ತಿದೆ. ದುಡಿಯುವ ವರ್ಗದ ಜನತೆ ಸಾಮ್ರಾಜ್ಯವಾದವನ್ನು ಕಿತ್ತೆಸೆದು ಸಮಾಜವಾದ ಸ್ಥಾಪಿಸುವ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.
ಸಮಾನತೆಗಾಗಿ ಜನಾಂದೋಲನ ರಾಜ್ಯ ಸಮಿತಿ ಸದಸ್ಯ ನೂರ್‌ಶ್ರೀಧರ್ ಪ್ರತಿಕ್ರಿಯೆಯಾಗಿ ಮಾತನಾಡಿ, ನಕ್ಸಲ್ಬರಿ ಹೋರಾಟ ಎಂದರೆ ಸಮಾನತೆಗಾಗಿ, ಬಡವರ ಅಧಿಕಾರಕ್ಕಾಗಿ ನಡೆಸಿದ ಹೋರಾಟವಾಗಿದ್ದು ಹಾಗೂ ಕ್ರಾಂತಿಕಾರಿ ಚಳುವಳಿಯಾಗಿದೆ ಎಂದರು.
ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಿಪಿಐ(ಎಂ.ಲ್) ಜಿಲ್ಲಾ ಕಾರ್ಯದರ್ಶಿ ಕಾಂ.ಎಚ್.ಸಿ.ಮಹೇಶ್ ವಹಿಸಿಕೊಂಡಿದ್ದರು. ಪ್ರಸ್ತಾವನೆಯನ್ನು ಕಾಂ. ಕೂದುವಳ್ಳಿ ಮಹೇಶ್ ನಡೆಸಿಕೊಟ್ಟರು. ಧ್ವಜಾರೋಹಣ ಮಾಡುವ ಮೂಲಕ ನಕ್ಸಲ್ಬರಿ ರೈತ ದಂಗೆಯಲ್ಲಿ ಹುತಾತ್ಮರಾದ ಸಿಪಿಐ(ಎಂಎಲ್) ಜಿಲ್ಲಾ ಇಸಿ ಸಮಿತಿ ಸದಸ್ಯರಾದ ಕಾಂ. ಜಗನ್ನಾಥ್.ಸಿ.ಜೆ., ಜನಕವಿ ಕಾಂ. ಸಿ.ದಾನಪ್ಪ ಮಸ್ಕಿ, ಕಾಂ. ಬಸವರಾಜ್, ಕಾಂ. ಮಂಜುನಾಥ್ ಬೈಗೂರು, ಕಾಂ. ವಿಜಯ್.ಎಸ್ ಮತ್ತಿತರರಿದ್ದರು.







