ಭರವಸೆ ಮರೆತ ಸಚಿವ ಕಿಮ್ಮನೆ ರತ್ನಾಕರ್: ಆರೋಪ
ಶಿವಮೊಗ್ಗ: ಜೆನ್ ನರ್ಮ್ ಯೋಜನೆ ನನೆಗುದಿಗೆ
ಶಿವಮೊಗ್ಗ, ಮೇ 27: ಶಿವಮೊಗ್ಗ ನಗರದಲ್ಲಿ ಸರಕಾರಿ ಸಿಟಿ ಬಸ್‌ಗಳು ಓಡೋದು ಯಾವಾಗ? ಈ ನಿಟ್ಟಿನಲ್ಲಿ ತಾವು ಕೈಗೊಂಡಿರುವ ಕ್ರಮಗಳೇನು ಎಂದು ಶಿವಮೊಗ್ಗ - ಭದ್ರಾವತಿಯ ಲಕ್ಷಾಂತರ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್‌ರನ್ನು ಪ್ರಶ್ನಿಸುತ್ತಿದ್ದಾರೆ.
ಯಾವುದೇ ಲಾಬಿ, ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರು ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗುವ ಸರಕಾರಿ ಸಿಟಿ ಬಸ್‌ಗಳ ಸಂಚಾರ ವಿಷಯದಲ್ಲಿ ಆಸಕ್ತಿ ವಹಿಸದಿರುವುದೇಕೆ? ಯೋಜನೆ ಘೋಷಣೆಯಾಗಿ ಮೂರು ವರ್ಷ ಕಳೆದರೂ ಬಸ್‌ಗಳ ಸಂಚಾರ ಆರಂಭಿಸುವಲ್ಲಿ ವಿಫಲವಾಗಿರುವುದೇಕೆ ಎಂದು ಸ್ಥಳೀಯ ನಾಗರಿಕರು, ಸಂಘಟನೆಗಳ ಮುಖಂಡರು ಸಚಿವರನ್ನು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಹಲವು ಬಾರಿ ಮನವಿಸಲ್ಲಿಸಲಾಗಿತ್ತು. ಶೀಘ್ರ ಆರಂಭವಾಗಲಿದೆ ಎಂದು ಸಚಿವರು ಭರವಸೆಯನ್ನಷ್ಟೇ ನೀಡುತ್ತಾ ಬಂದಿರುತ್ತಾರೆ. ಜೂನ್ ತಿಂಗಳಲ್ಲಿ ಮತ್ತೊಮ್ಮೆ ಸಚಿವರಿಗೆ ಮನವಿ ಅರ್ಪಿಸಲಿದ್ದೇವೆ. ತದನಂತರ ಸಚಿವರ, ಶಾಸಕರ, ಸಂಸದರ ಮನೆ-ಕಚೇರಿಯ ಮುಂಭಾಗದಲ್ಲಿ ಅಣ್ಣಾ ಹಝಾರೆ ಸಂಘಟನೆಯೊಂದಿಗೆ ನಾಗರಿಕರು ಸೇರಿಕೊಂಡು ಬಸ್‌ಗಳ ಸಂಚಾರ ಆರಂಭವಾಗುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಜನರು ಸರಕಾರವನ್ನು ಎಚ್ಚರಿಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜೆನ್ ನರ್ಮ್ ಯೋಜನೆಯಡಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಶಿವಮೊಗ್ಗದಲ್ಲಿ 65 ಹಾಗೂ ಭದ್ರಾವತಿಯಲ್ಲಿ 35 ಬಸ್‌ಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಬಸ್‌ಗಳ ಖರೀದಿಗೆ, ಪ್ರತ್ಯೇಕ ಬಸ್ ಟರ್ಮಿನಲ್, ವರ್ಕ್‌ಶಾಪ್, ಡಿಪೋ ನಿರ್ಮಾಣಕ್ಕೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿತ್ತು. ಈ ಹಿಂದಿನ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್‌ರವರು ಎರಡೂ ನಗರಗಳಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ಪರ್ಮಿಟ್ ಮಂಜೂರು ಮಾಡಿದ್ದರು. ಬಸ್ ಟರ್ಮಿನಲ್, ಡಿಪೋ, ವರ್ಕ್‌ಶಾಪ್ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದರು. ವಿಪುಲ್ ಬನ್ಸಲ್‌ರವರ ಪ್ರಯತ್ನದ ಫಲವಾಗಿ ಭದ್ರಾವತಿಯಲ್ಲಿ ಈಗಾಗಲೇ ಸಿಟಿ ಬಸ್ ಟರ್ಮಿನಲ್, ಡಿಪೋ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಡಿ.ಸಿ. ವಿಪುಲ್ ಬನ್ಸಲ್ ಜಿಲ್ಲೆಯಿಂದ ವರ್ಗಾವಣೆಯಾಗುತ್ತಿದ್ದಂತೆ ಈ ಯೋಜನೆ ಕೂಡ ಹಳ್ಳ ಹಿಡಿಯಿತು. ಮತ್ತೊಂದೆಡೆ ಶಿವಮೊಗ್ಗ ನಗರದಲ್ಲಿ ಸಿಟಿ ಬಸ್ ಟರ್ಮಿನಲ್, ಡಿಪೋ, ವರ್ಕ್‌ಶಾಪ್ ಕಟ್ಟಡ ನಿರ್ಮಾಣ ಕಾರ್ಯವೇ ನಡೆಯಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಸೂಕ್ತ ನಿವೇಶನ ಗುರುತಿಸುವ ಪ್ರಕ್ರಿಯೆ ಕೂಡ ವಿಳಂಬವಾಯಿತು. ಪ್ರಸ್ತುತ ಜಿಲ್ಲಾಡಳಿತ ಗುರುತಿಸಿರುವ ಜಾಗಕ್ಕೆ ಕೆಎಸ್ಸಾರ್ಟಿಸಿ ಸಂಸ್ಥೆ ಹಣ ಪಾವತಿಸಿ ತನ್ನ ವಶಕ್ಕೆ ಪಡೆಯುವ ಕೆಲಸಕ್ಕೇ ಇನ್ನೂ ಮುಂದಾಗಿಲ್ಲ. ನನೆಗುದಿಗೆ:
ಈ ಹಿಂದೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಿದ್ದ ವೇಳೆ, ಶಿವಮೊಗ್ಗ-ಭದ್ರಾವತಿಯಲ್ಲಿ ಸರಕಾರಿ ಸಿಟಿ ಬಸ್ ಸಂಚಾರ ಖಚಿತ ಎಂದು ಹೇಳಿದ್ದರು. ಅವರ ಭರವಸೆ ಹುಸಿಯಾಗಿದೆ. ಪ್ರಸ್ತುತ ಈ ಯೋಜನೆ ಅಕ್ಷರಶಃ ನನೆಗುದಿಗೆ ಬಿದ್ದಿದೆ. ಸದ್ಯದ ಮಟ್ಟಿಗೆ ಬಸ್ ಸಂಚಾರ ಆರಂಭವಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಸರಕಾರಿ ಸಿಟಿ ಬಸ್‌ಗಳು 20 ಕಿ.ಮೀ. ವ್ಯಾಪ್ತಿಯವರೆಗೆ ಸಂಚರಿಸುತ್ತವೆ. ಇದರಿಂದ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ನಿವಾಸಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು, ನಾಗರಿಕರಿಗೆ ವಾರ್ಷಿಕ, ಮಾಸಿಕ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಲಭ್ಯವಾಗಲಿದೆ. ಎರಡೂ ನಗರಗಳ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಉಂಟಾಗಲಿದೆ. ಆದರೆ ಜನಪರ ಯೋಜನೆಯ ಅನುಷ್ಠಾನಕ್ಕೆ ನಮ್ಮ ಜನಪ್ರತಿನಿಧಿಗಳು ಆಸಕ್ತಿವಹಿಸದಿರುವುದು ನಿಜಕ್ಕೂ ಖಂಡನೀಯ ಸಂಗತಿ ಎಂದು ಯುವ ಮುಖಂಡ ಸಂತೋಷ್‌ಅಸಮಾಧಾನ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಬೇಕಾಗಿದೆ. ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.
ಜಿಲ್ಲೆಯತ್ತ ಮುಖ ಮಾಡದ ಸಾರಿಗೆ ಸಚಿವರು...!
ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಗೆ ಅಧಿಕೃತ ಭೇಟಿ ನೀಡಿಲ್ಲ. ಅವರು ಸಚಿವರಾಗಿ ಮೂರು ವರ್ಷ ಕಳೆದರೂ ಒಮ್ಮೆಯೂ ಜಿಲ್ಲೆಯಲ್ಲಿ ತನ್ನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿಲ್ಲ. ಶಿವಮೊಗ್ಗ ಜಿಲ್ಲೆಯನ್ನೇ ಸಾರಿಗೆ ಸಚಿವರು ಮರೆತಂತೆ ಕಾಣುತ್ತಿದೆ ಎಂದು ಪ್ರಗತಿಪರ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಒತ್ತಡ, ಲಾಬಿಗೆ ಮಣಿಯದೆ ಜೆನ್ ನರ್ಮ್ ಯೋಜನೆಯಡಿ ರಾಜ್ಯಕ್ಕೆ ಮಂಜೂರಾಗಿರುವ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳುವುದಾಗಿ ಸಚಿವರು ಹಲವು ಬಾರಿ ಹೇಳಿಕೆ ನೀಡಿದ್ದಾರೆ. ತಕ್ಷಣವೇ ಸಾರಿಗೆ ಸಚಿವರು ಜಿಲ್ಲೆಗೆ ಭೇಟಿ ನೀಡಬೇಕು. ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಿಗೆ ಜೆನ್‌ನರ್ಮ್ ಯೋಜನೆಯಡಿ ಮಂಜೂರಾಗಿರುವ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು ಒತ್ತಾಯಿಸಿದ್ದಾರೆ. ಸರಕಾರಿ ಸಿಟಿ ಬಸ್ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಇಷ್ಟರಲ್ಲಿಯೇ ಸರಕಾರಿ ಸಿಟಿ ಬಸ್‌ಗಳ ಸಂಚಾರ ಆರಂಭವಾಗುವುದು ನಿಶ್ಚಿತ ಎಂದು ಸಚಿವರು ಭರವಸೆ ಹೇಳಿದ್ದರು. ಆದರೆ ಸಚಿವರ ಹೇಳಿಕೆ ಹುಸಿಯಾಗಿದೆ. ಶಿವಮೊಗ್ಗ-ಭದ್ರಾವತಿ ನಗರಗಳಲ್ಲಿ ಬಸ್‌ಗಳ ಸಂಚಾರ ಆರಂಭವಾಗಿಲ್ಲ. ನಾಗರಿಕರು ಸಚಿವರ ಮೇಲಿದ್ದ ನಂಬಿಕೆ ಕಳೆದುಕೊಳ್ಳುವಂತಾಗಿದೆ.
=
ಟಿ.ಎಂ.ಅಶೋಕ್ ಯಾದವ್, ಪ್ರಧಾನ ಕಾರ್ಯದರ್ಶಿ, ಅಣ್ಣಾ ಹಝಾರೆ ಹೋರಾಟ ಸಮಿತಿ







