ದಾವಣಗೆರೆ: ಪ್ರಧಾನಿ ಭೇಟಿ ಹಿನ್ನೆಲೆ
ಅಂಗಡಿ-ಮುಂಗಟ್ಟು ತೆರವು

ದಾವಣಗೆರೆ, ಮೇ 27: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 29ಕ್ಕೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಅಕ್ಕಪಕ್ಕದ ಶೆಡ್, ಗೂಡಂಗಡಿ ಸೇರಿದಂತೆ ಅಂಗಡಿಗಳನ್ನು ಶುಕ್ರವಾರ ತೆರವು ಗೊಳಿಸಲಾಯಿತು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಮಹಾನಗರ ಪಾಲಿಕೆಯ ಆರೋಗ್ಯ ಹಾಗೂ ತಾಂತ್ರಿಕ ಸಿಬ್ಬಂದಿಯ ಎರಡು ತಂಡಗಳ ಮೂಲಕ ತೆರವು ಕಾರ್ಯ ಕೈಗೊಳ್ಳಲಾಗಿತ್ತು. ಕೆಲವು ಕಡೆ ಅನಾಥವಾಗಿದ್ದ ಶೆಡ್‌ಗಳನ್ನು ಪಾಲಿಕೆ ತನ್ನ ವಶಕ್ಕೆ ಪಡೆಯಿತು.
ನಗರದ ವಿದ್ಯಾರ್ಥಿ ಭವನದಿಂದ ಲಕ್ಷ್ಮೀ ಪ್ಲೋರ್ ಮಿಲ್‌ವರೆಗೆ, ಹದಡಿ ರಸ್ತೆಯ ಜಿಲ್ಲಾಧಿಕಾರಿಗಳ ನಿವಾಸದ ಬಳಿಯ ರಿಂಗ್ ರಸ್ತೆಯಿಂದ ಶಾಮನೂರು ರಸ್ತೆಯವರೆಗೆ ತೆರವು ಕಾರ್ಯಾಚರಣೆ ಸಾಗಿತು.
ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದ ಗೂಡಂಗಡಿಗಳು ಹಾಗೂ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ಇದೇ ವೇಳೆ ತೆರವುಗೊಳಿಸಲಾಯಿತು. ಇದರ ಜೊತೆಗೆ ರಸ್ತೆ ಮೇಲೆ ಇದ್ದ ಹಂಪ್ಸ್‌ಗಳ ತೆರವು ಕಾರ್ಯಾಚರಣೆಯೂ ನಡೆಯಿತು. ಮೋದಿ ಸಾಗುವ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಗಳು ಭರದಿಂದ ಸಾಗುತ್ತಿವೆ. ರಸ್ತೆಯ ಇಕ್ಕೆಲಗಳಿಗೆ ಮಣ್ಣು ತುಂಬಿಸುವ ಕೆಲಸ ನಡೆಯುತ್ತಿವೆ.
ಪಾಲಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸುಂಕದ್, ಪರಿಸರ ಅಭಿಯಂತರ ಜಾಫರ್ ಸಾಬ್, ಉಮೇಶ್, ತಿಮಪ್ಪ, ಶಶಿಧರ್, ಪ್ರಕಾಶ್, ಸಂತೋಷ್, ರಾಮಪ್ಪ, ಪ್ರಕಾಶ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







