ಪ್ರಧಾನಿ ಮೋದಿ ಪತ್ನಿಯನ್ನು ಬಿಟ್ಟ ಬ್ರಹ್ಮಚಾರಿ
ಮಧ್ಯ ಪ್ರದೇಶದ ಬಿಜೆಪಿ ಸಚಿವರ ಹೇಳಿಕೆ
ಭೋಪಾಲ್, ಮೇ 27: ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಹಾಗು ಹಾಲಿ ಗೃಹಸಚಿವ ಬಾಬುಲಾಲ್ ಗೌರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇಲ್ಲಿನ ರಾಯ್ ಸೇನ್‌ನಲ್ಲಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ದೇಶಸೇವೆಗಾಗಿ ತಮ್ಮ ಪತ್ನಿಯನ್ನು ಬಿಟ್ಟು ಪ್ರಧಾನಿ ಮೋದಿ ಅವರು ಬ್ರಹ್ಮಚಾರಿಯಾಗಿದ್ದಾರೆ ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇಶದ ಪ್ರಧಾನಿ ಮೋದಿ ಅವರು ಬ್ರಹ್ಮಚಾರಿ. ಅವರಿಗೆ ಮಕ್ಕಳು, ಕುಟುಂಬ ಇಲ್ಲ. ದೇಶಸೇವೆಗಾಗಿ ಅವರು ತಮ್ಮ ಪತ್ನಿಯನ್ನೂ ಬಿಟ್ಟುಬಿಟ್ಟರು. ಅವರು ಬಹಳ ಚಾಣಾಕ್ಷ, ಯೋಗಿ ಹಾಗು ತಪಸ್ವಿ ವ್ಯಕ್ತಿಯಾಗಿದ್ದಾರೆ ಎಂದು ಗೌರ್ ಹೇಳಿದ್ದಾರೆ. ಇದು ಮೋದಿ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ. 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಾನು ವಿವಾಹಿತ ಎಂದು ನಮೂದಿಸಿದ್ದು, ತನ್ನ ಪತ್ನಿ ಜಶೋದಾ ಬೆನ್ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈಗ ಅವರ ಪಕ್ಷದ ಹಿರಿಯ ನಾಯಕ ಗೌರ್ ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಸಂಘಟನೆಗಳು ಗೌರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇವರಿಗೆ ಪ್ರಧಾನಿ ಬಗ್ಗೆಯಾಗಲಿ, ಮಹಿಳೆಯರ ಬಗ್ಗೆಯಾಗಲಿ ಗೌರವವಿಲ್ಲ. ಇದು ಆತಂಕಕಾರಿ ಹೇಳಿಕೆ ಎಂದು ಹೇಳಿವೆ.





