ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹೈ-ಎಂಡ್ ಪಿಇಟಿ ಸಿಟಿ ಸ್ಕಾನ್ ಯಂತ್ರ ಉದ್ಘಾಟನೆ
.jpg)
ಮಂಗಳೂರು, ಮೇ 27: ನಗರದ ಕುಂಟಿಕಾನದಲ್ಲಿರುವ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾದ ಹೈ -ಎಂಡ್ ಪಿಇಟಿ ಸಿಟಿ ಸ್ಕಾನ್ ಯಂತ್ರವನ್ನು ಎಡನೀರು ಮಠದ ಶ್ರೀ ಕೇಶವಾನಂದ ಸ್ವಾಮೀಜಿ ಇಂದು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಎ.ಜೆ. ಸಮೂಹ ಸಂಸ್ಥೆ ರೋಗಿಗಳ ಆರೈಕೆ ಮಾಡುವಲ್ಲಿ ವಹಿಸುತ್ತಿರುವ ಕಾಳಜಿಯಿಂದ ಉನ್ನತ ಗುಣಮಟ್ಟದ ಆಸ್ಪತ್ರೆಯಾಗಿ ಬೆಳೆದಿದೆ. ಉತ್ತಮ ಆರೋಗ್ಯ ಸೇವಾಸೌಲಭ್ಯವನ್ನು ನೀಡುವ ಸಂಸ್ಥೆಯಾಗಿ ಮುಂದೆಯೂ ಕೀರ್ತಿ ಗಳಿಸಲಿ ಎಂದು ಶುಭ ಹಾರೈಸಿದರು.
ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ 2013ರಲ್ಲಿ ಕ್ಯಾನ್ಸರ್‌ಗೆ ಸಮಗ್ರವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಬೆಳೆದಿದೆ. ಪ್ರಸಕ್ತ ಹೈ-ಎಂಡ್ ಪಿಇಟಿ ಸಿಟಿ ಸ್ಕಾನ್ ಅಳವಡಿಕೆಯಿಂದ ಒಂದೇ ಸೂರಿನಡಿ ಎಲ್ಲಾ ಚಿಕಿತ್ಸೆಯ ಜೊತೆಗೆ ರೋಗದ ಮುನ್ಸೂಚನೆಯನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೊಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ಸಮಾರಂಭದಲ್ಲಿ ಎ.ಜೆ. ಆಸ್ಪತ್ರೆಯ ವೈದ್ಯಕೀಯ ಮತ್ತು ಆಡಳಿತ ವಿಭಾಗದ ನಿರ್ದೇಶಕಿ ಅಮಿತಾ ಪಿ.ಮಾರ್ಲ, ಎ.ಜೆ.ಸಮೂಹ ಸಂಸ್ಥೆಯ ನಿರ್ದೇಶಕಿ ಶಾರದಾ ಜೆ.ಶೆಟ್ಟಿ, ಎ.ಪ್ರಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





