ಫ್ರೆಂಚ್ ಓಪನ್: ಮರ್ರೆ ಪ್ರಿ-ಕ್ವಾರ್ಟರ್‌ಫೈನಲ್‌ಗೆ

ಪ್ಯಾರಿಸ್, ಮೇ 27: ಹಿರಿಯ ಆಟಗಾರ ಇವೊ ಕಾರ್ಲೊವಿಕ್‌ರನ್ನು ಮಣಿಸಿದ ಬ್ರಿಟನ್‌ನ ಆ್ಯಂಡಿ ಮರ್ರೆ ಫ್ರೆಂಚ್ ಓಪನ್‌ನಲ್ಲಿ ಅಂತಿಮ 16ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಶುಕ್ರವಾರ ಇಲ್ಲಿ ಒಂದು ಗಂಟೆ, 56 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎರಡನೆ ಶ್ರೇಯಾಂಕದ ಮರ್ರೆ ಕಾರ್ಲೊವಿಕ್‌ರನ್ನು 6-1, 6-4, 7-6(7/3) ಸೆಟ್‌ಗಳಿಂದ ಮಣಿಸಿದರು.
ಮರ್ರೆ ಕ್ವಾರ್ಟರ್‌ಫೈನಲ್ ತಲುಪಬೇಕಾದರೆ ಮುಂದಿನ ಸುತ್ತಿನಲ್ಲಿ ಅಮೆರಿಕದ ಜಾನ್ ಇಸ್ನೆರ್ ಅಥವಾ ರಶ್ಯದ ಟೆಮುರಝ್ ಗಬಾಶ್ವಿಲಿ ಅವರನ್ನು ಎದುರಿಸಬೇಕಾಗಿದೆ.
ಕಾರ್ಲೊವಿಕ್‌ರಂತಹ ಆಟಗಾರನ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವುದು ಅತ್ಯಂತ ಮುಖ್ಯ. ಅಂತಿಮ ಸೆಟ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಟೈ-ಬ್ರೇಕರ್‌ನಲ್ಲಿ ಪಂದ್ಯ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಮರ್ರೆ ಪ್ರತಿಕ್ರಿಯಿಸಿದ್ದಾರೆ.
37ರ ಹರೆಯದ ಕಾರ್ಲೊವಿಕ್ 1991ರಲ್ಲಿ ಜಿಮ್ಮಿ ಕಾನರ್ಸ್ ಬಳಿಕ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ತಲುಪಿದ್ದ ಅತ್ಯಂತ ಹಿರಿಯ ಆಟಗಾರನಾಗಿದ್ದರು.
ಮುಗುಗುಝ ನಾಲ್ಕನೆ ಸುತ್ತಿಗೆ ಪ್ರವೇಶ
ಪ್ಯಾರಿಸ್, ಮೇ27: ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಝ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತು ಪ್ರವೇಶಿಸಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಮುಗುರುಝ ಬೆಲ್ಜಿಯಂನ ಯಾನಿನಾ ವಿಕ್‌ಮಯೆರ್‌ರನ್ನು 6-3, 6-0 ಅಂತರದಿಂದ ಮಣಿಸಿದ್ದಾರೆ.
ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ 22ರ ಹರೆಯದ ಮುಗುರುಝ ಕೊನೆಯ 9 ಗೇಮ್ಸ್‌ನ್ನು ಗೆದ್ದುಕೊಂಡರು.
ಫ್ರೆಂಚ್ ಓಪನ್: ಪೇಸ್, ಬೋಪಣ್ಣ ಮೂರನೆ ಸುತ್ತಿಗೆ ತೇರ್ಗಡೆ
ಪ್ಯಾರಿಸ್, ಮೇ 27: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅಗ್ರ ಶ್ರೇಯಾಂಕದ ಪುರುಷರ ಡಬಲ್ಸ್ ಸ್ಟಾರ್‌ಗಳಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ತಮ್ಮ ಜೊತೆಗಾರರೊಂದಿಗೆ ಎರಡನೆ ಸುತ್ತಿನ ಪಂದ್ಯವನ್ನು ಜಯಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಎರೆಡನೆ ಸುತ್ತಿನ ಡಬಲ್ಸ್ ಪಂದ್ಯದಲ್ಲಿ ಆರನೆ ಶ್ರೇಯಾಂಕದ ರೋಹನ್ ಬೋಪಣ್ಣ ಹಾಗೂ ಫ್ಲಾರಿನ್ ಮೆರ್ಗಿಯಾ ಫ್ರೆಂಚ್‌ನ ಗ್ರೆಗೊರ್ ಬಾರೆರ್ ಹಾಗೂ ಕ್ವಿಂಟನ್ ಹೇಲಿಸ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.
ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿರುವ 16ನೆ ಶ್ರೇಯಾಂಕದ ಲಿಯಾಂಡರ್ ಪೇಸ್ ಹಾಗೂ ಮಾರ್ಸಿನ್ ಮಾಟ್ಕೊವ್‌ಸ್ಕಿ ಮತ್ತೊಂದು ಎರಡನೆ ಸುತ್ತಿನ ಪಂದ್ಯದಲ್ಲಿ ಜುಲಿಯನ್ ನೋಲ್ ಹಾಗೂ ಫ್ಲಾರಿನ್ ಮಯೆರ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು.







