ನನಗೆ ಪ್ರತಿದಿನವೂ ಹೊಸತು: ಕೊಹ್ಲಿ

ಹೊಸದಿಲ್ಲಿ, ಮೇ 27: ‘‘ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಹೆಚ್ಚು ಗಮನ ನೀಡುವೆ. ನನ್ನ ಪಾಲಿಗೆ ಪ್ರತಿದಿನವೂ ಹೊಸತು. ನಾನು ಪ್ಲಸ್ ಹಾಗೂ ಮೈನಸ್‌ನ್ನು ಸಮಾನವಾಗಿ ತೆಗೆದುಕೊಳ್ಳುವೆ. ಇದು ನನ್ನ ಪ್ರದರ್ಶನದ ಸುಧಾರಣೆಗೆ ನೆರವಾಗುತಿದೆ’’ ಎಂದು ಪ್ರಸ್ತುತ ಜೀವನಶ್ರೇಷ್ಠ ಫಾರ್ಮ್‌ನಲ್ಲಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಆರಂಭಿಸಿದ್ದ ಕೊಹ್ಲಿ ಐಪಿಎಲ್‌ನಲ್ಲಿ ಈಗಾಗಲೇ 4 ಶತಕಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ 83.54ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು, ಸಾವಿರ ರನ್ ಪೂರೈಸಲು ಇನ್ನು 81 ರನ್ ಅಗತ್ಯವಿದೆ.
ತನ್ನ ಸ್ಥಿರ ಪ್ರದರ್ಶನದ ಬಗ್ಗೆ ಮಾತನಾಡಿದ ಕೊಹ್ಲಿ, ‘‘ನಾನು ಎಲ್ಲ ಕ್ರಿಕೆಟಿಗರಂತೆಯೇ ಆರಂಭದಲ್ಲಿ ಕಷ್ಟವನ್ನು ಎದುರಿಸಿದ್ದೆ. ನಿಮಗೆ ನಿಮ್ಮ ಸ್ಥಾನದ ಬಗ್ಗೆ ಅಭದ್ರತೆ ಕಾಡಿದರೆ, ತಪ್ಪು ಮಾಡುತ್ತೀರಿ, ಖಿನ್ನತೆಗೆ ಒಳಗಾಗುತ್ತೀರಿ. ನೀವು ಉತ್ತಮ ಪ್ರದರ್ಶನ ನೀಡಲು ಬಯಸಿದಾಗ ಮೈದಾನದ ಹೊರಗೆ ಹಾಗೂ ಒಳಗಿನ ವಿಷಯ ನಿಮ್ಮ ಹಿಡಿತದಲ್ಲಿರುವುದಿಲ್ಲ’’ ಎಂದರು.





