ಕೇಂದ್ರದ ಎರಡು ವರ್ಷ ಜನರಿಗೆ ಕಷ್ಟ: ಆಪ್ ಟೀಕೆ
ಬೆಂಗಳೂರು, ಮೇ 27: ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದ ಗದ್ದುಗೆಯನ್ನು ಏರಿ ಎರಡು ವರ್ಷ ಪೂರೈಸಿದೆ. ಆದರೆ, ಪ್ರಧಾನಮಂತ್ರಿ ಚುನಾವಣೆಗೂ ಮುನ್ನ ದೇಶದ ಜನರಿಗೆ ನೀಡಿದ್ದ ವಾಗ್ದಾನಗಳನ್ನು ಮರೆತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಟೀಕಿಸಿದೆ.
ನರೇಂದ್ರ ಮೋದಿ ನೀಡಿದ್ದ ‘ಅಚ್ಛೆ ದಿನ’ದ ಆಶ್ವಾಸನೆಯನ್ನು ನಂಬಿ ಜನತೆ ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಿದ್ದರು. ಆದರೆ ಚುನಾವಣೆ ನಂತರ ಮೋದಿಗೆ ದೇಶದ ಜನರಿಗೆ ನೀಡಿದ್ದ ಯಾವುದೇ ವಾಗ್ದಾನ ನೆನಪಿಗೆ ಇದ್ದಂತೆ ಕಾಣುತ್ತಿಲ್ಲ. ಅವರ ವಿದೇಶಿ ಪ್ರವಾಸದ ಲೆಕ್ಕ ನೋಡಿದರೆ ಅವರು ಭಾರತವನ್ನು ಮರೆತಂತೆ ಕಾಣುತ್ತಿದೆ. ಬಿಜೆಪಿಯ ‘ಐಟಿ ತಂಡ’ವನ್ನು ಬಿಟ್ಟರೆ ದೇಶದ ಉಳಿದೆಲ್ಲೂ ಜನರಿಗೆ ಅಚ್ಛೆ ದಿನದ ಯಾವುದೇ ಕುರುಹು ಕಾಣಸಿಗದಾಗಿದೆ ಎಂದು ರಾಜ್ಯ ಸಂಚಾಲಕ ಶಿವಕುಮಾರ್ ಚೆಂಗಲರಾಯ ಟೀಕಿಸಿದ್ದಾರೆ.
ಯುಟರ್ನ್ ಸರಕಾರ: ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು ಇಳಿಸಲು ಹೋಗಿದ್ದು, ಭವಿಷ್ಯ ನಿಧಿ ಹಿಂಪಡೆಯುವುದರ ಮೇಲೆ ನಿರ್ಬಂಧಗಳನ್ನು ಹೇರಿದ್ದು ಹಾಗೂ ಭವಿಷ್ಯ ನಿಧಿ ಮೇಲೆಯೆ ತೆರಿಗೆ ಹೇರಲು ಹೊರಟಿದ್ದು ನಂತರದಲ್ಲಿ ದೇಶದ ಜನರ ವಿರೋಧಕ್ಕೆ ಮಣಿದು ಎಲ್ಲವನ್ನು ಹಿಂಪಡೆಯಿತು ಎಂದು ಅವರು ದೂರಿದ್ದಾರೆ.ರ್ಥ ವ್ಯವಸ್ಥೆ ಸುಧಾರಣೆಯಲ್ಲಿ ವಿಫಲ: ಕೆಟ್ಟ ಸಾಲಗಳನ್ನು ಕಡಿಮೆ ಮಾಡುವುದರ ಬದಲು ಏರಿಸುತ್ತಾ ಹೋಗಿದೆ. ಕಳೆದ ಐದು ವರ್ಷದಲ್ಲೆ ಅತ್ಯಂತ ಹೆಚ್ಚು ವ್ಯಾಪಾರ ಕೊರತೆ ಹಾಗೂ ರಫ್ತು ಉತ್ತೇಜನದಲ್ಲಿ ಸೋಲು. ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಗಣನೀಯ ಕುಸಿತವಾಗಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಸುಮಾರು 9 ಸಾವಿರ ಕೋಟಿ ರೂ.ಯಷ್ಟು ಸಾಲ ಹೊತ್ತ ವಿಜಯ ಮಲ್ಯರನ್ನು ಸುಲಭವಾಗಿ ದೇಶದಿಂದ ಹೊರ ನಡೆಯಲು ಅವಕಾಶ ಕೊಟ್ಟಿದೆ. ಕಪ್ಪು ಹಣದ ಬಗ್ಗೆ ಸಾಕಷ್ಟು ಮಾತನಾಡಿದ್ದ ನರೇಂದ್ರ ಮೋದಿ ರಾಷ್ಟ್ರೀಕೃತ ಬ್ಯಾಂಕಿನಿಂದಲೇ ಹಾಂಕಾಂಗ್‌ಗೆ ರವಾನೆಯಾದ 6 ಸಾವಿರ ಕೋಟಿ ರೂ.ಕಪ್ಪುಹಣವನ್ನು ತಡೆಯಲು ಆಗಲಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಚ್ಛೇದಿನದ ಬದಲು ತೆರಿಗೆ ದಿನಗಳು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಡಿಯುವ ನೀರಿಗಿಂತ ಕಡಿಮೆ ದರದಲ್ಲಿ ಲಭ್ಯವಿದ್ದರೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ, ತೆರಿಗೆ ಹಣದ ಸಂಗ್ರಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಸರಕಾರ, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಸುಂಕ ಏರಿಸುತ್ತಾ ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಎಳೆಯುತ್ತಲೆ ಇದೆ ಎಂದು ಶಿವಕುಮಾರ್ ಟೀಕಿಸಿದ್ದಾರೆ.





