ಭ್ರಷ್ಟಾಚಾರ ರಹಿತ ಸರಕಾರಕ್ಕೆ ಅಭೂತಪೂರ್ವ ಬೆಂಬಲ: ವೆಂಕಯ್ಯನಾಯ್ಡು

ಬೆಂಗಳೂರು, ಮೇ 27: ಕೇಂದ್ರ ಬಿಜೆಪಿ ಸರಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದ್ದರಿಂದ ದೇಶದ ಜನರು ಬಿಜೆಪಿ ಸರಕಾರದ ಆಡಳಿತಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ಶುಕ್ರವಾರ ನಗರದ ಮಲ್ಲೇಶ್ವರಂನ ಶಿರೂರು ಪಾರ್ಕ್‌ನ ಮೈದಾನದಲ್ಲಿ ರಾಜ್ಯ ಬಿಜೆಪಿ ಘಟಕ ಆಯೋಜಿಸಿದ್ದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಳೆದ ಯುಪಿಎ ಸರಕಾರ 2-ಜಿ, ಕಾಮನ್‌ವೆಲ್ತ್, ಕಲ್ಲಿದ್ದಲು ಹಗರಣ ಸೇರಿದಂತೆ ಇನ್ನಿತರ ಹಗರಣಗಳಲ್ಲೇ ತನ್ನ ಹತ್ತು ವರ್ಷದ ಅಧಿಕಾರವನ್ನು ಪೂರೈಸಿ, ಕೇಂದ್ರ ಸರಕಾರದ ಹಣಕಾಸಿನ ಬೊಕ್ಕಸವನ್ನೇ ಖಾಲಿ ಮಾಡಿತ್ತು. ಆದರೆ, ಬಿಜೆಪಿ ಸರಕಾರ ಈ ಖಜಾನೆಯನ್ನು ತುಂಬಿಸಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿ ಜನರಿಂದ ಅಭೂತಪೂರ್ವ ಬೆಂಬಲ ಪಡೆದಿದ್ದೇವೆ ಎಂದು ಹೇಳಿದರು.ಳೆದ ಯುಪಿಎ ಸರಕಾರದ ಪ್ರಧಾನಿ ಮನಮೋಹನ್‌ಸಿಂಗ್ ಅವರು ಯಾವುದೇ ಯೋಜನೆಯನ್ನು ಜಾರಿಗೆ ತರಬೇಕಾದರೂ ಸೋನಿಯಾಗಾಂಧಿ ಅವರ ಮೋರೆ ಹೋಗಬೇಕಾಗಿತ್ತು. ಆದರೆ, ಕೇಂದ್ರ ಬಿಜೆಪಿ ಸರಕಾರದ ಸಚಿವರುಗಳು ಉತ್ತಮ ಯೋಜನೆಗಳನ್ನು ಬಿಜೆಪಿ ಮುಖಂಡರೊಂದಿಗೆ ಚರ್ಚಿಸದೆ ಜಾರಿಗೆ ತರುವ ಮುಕ್ತ ವಾತಾವರಣವನ್ನು ಕಲ್ಪಿಸಿದೆ ಎಂದು ತಿಳಿಸಿದರು.
ದೇಶಾದ್ಯಂತ 60 ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಂಡು ಬೆಂಗಳೂರನ್ನು ಸ್ಮಾರ್ಟ್‌ಸಿಟಿ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ, ತಾವು ಖುದ್ದಾಗಿ ಈ ನಗರವನ್ನೂ ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ಸೇರಿಸಿಯೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನುಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಉದ್ಯಾನನಗರಿಯನ್ನು ಕಸದ ನಗರವನ್ನಾಗಿ ಪರಿವರ್ತಿಸಿದ್ದಾರೆ. ಈ ಅನ್ಯಾಯವನ್ನು ಖಂಡಿಸಿ ಮುಂದಿನ ತಿಂಗಳ 12 ತಾರೀಖಿನಿಂದ ಪ್ರತಿ ವಾರ್ಡ್‌ನಲ್ಲಿ ಕಾಂಗ್ರೆಸ್ ಸರಕಾರದ ವೈಫಲ್ಯ ಹಾಗೂ ವಾರ್ಡ್‌ಗಳ ಕಾಮಗಾರಿಗಳ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ ಜಾರಿಗೆ ತರುತ್ತೇವೆ ಎಂದು ಹೇಳುವ ಮೂಲಕ ಭ್ರಷ್ಟಾಚಾರ ರಕ್ಷಕ ದಳವನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಸುಭಾಷ್ ಬಿ. ಅಡಿ ಅವರನ್ನು ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಿ ಅವಮಾನಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರ ವಿಜಯ್ ಸೋನ್ಕರ್ ಶಾಸ್ತ್ರಿ, ರಾಜ್ಯ ಹಣಕಾಸು ಸಚಿವ ಜಯಂತ್ ಸಿನ್ಹಾ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಸುರೇಶ್‌ಕುಮಾರ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಆರ್.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.







