ಕ್ವಿಟೋವಾಗೆ ಶಾಕ್ ನೀಡಿದ ಮಾಜಿ ಟೆನಿಸ್ ಬಾಲ್‌ಗರ್ಲ್ ರೋಜರ್ಸ್

ಪ್ಯಾರಿಸ್, ಮೇ 28: ಒಂದು ಕಾಲದಲ್ಲಿ ಟೆನಿಸ್ ಅಂಗಳದಲ್ಲಿ ಚೆಂಡನ್ನು ಹೆಕ್ಕಿಕೊಡುವ ಕೆಲಸ ಮಾಡುತ್ತಿದ್ದ ಶೆಲ್ಬಿ ರೋಜರ್ಸ್ ಪ್ರಸ್ತುತ ನಡೆಯುತ್ತಿರುವ ಫ್ರೆಂಚ್ ಓಪನ್‌ನಲ್ಲಿ ದೊಡ್ಡ ಬೇಟೆಯಾಡುವ ಮೂಲಕ ವಿಶ್ವವನ್ನು ತನ್ನತ್ತ ಸೆಳೆದಿದ್ದಾರೆ.
ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಶೆಲ್ಬಿ ರೋಜರ್ಸ್ ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೋವಾರನ್ನು 6-0, 6-7(3), 6-0 ಸೆಟ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದರು.
ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಕ್ವಿಟೋವಾರನ್ನು ಮಣಿಸಿ ದೊಡ್ಡ ಆಘಾತ ನೀಡಿರುವ ರೋಜರ್ಸ್‌ಗೆ ಅಭಿಮಾನಿಗಳ ಬಳಗ ಹುಟ್ಟುಕೊಂಡಿದೆ. 23ರ ಹರೆಯದ, 108ನೆ ರ್ಯಾಂಕಿನ ಆಟಗಾರ್ತಿ ರೋಜರ್ಸ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಅಂತಿಮ -16 ಸುತ್ತಿಗೆ ತೆರಳಿದ್ದಾರೆ. ಮುಂದಿನ ಸುತ್ತಿನಲ್ಲಿ ರೊಮಾನಿಯದ ಐರಿನಾ ಬೇಗು ಅವರನ್ನು ಎದುರಿಸಲಿದ್ದಾರೆ.
ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ತಕ್ಷಣ ಟೆನಿಸ್ ರಾಕೆಟ್‌ನ್ನು ನೆಲಕ್ಕೆ ಚೆಲ್ಲಿದ ರೋಜರ್ಸ್ ಪ್ಲೇಯರ್ ಬಾಕ್ಸ್‌ನಲ್ಲಿದ್ದ ಹೆತ್ತವರತ್ತ ಧಾವಿಸಿ ಅವರನ್ನು ತಬ್ಬಿಕೊಂಡು ಸಂಭ್ರಮಪಟ್ಟರು.
‘‘ಸ್ಟೇಡಿಯಂನಲ್ಲಿ ಚಪ್ಪಾಳೆಯ ಸದ್ದು ಕೇಳಿಸುತ್ತಿದೆ. ಸಂತೋಷವನ್ನು ತಡೆಯಲಾಗುತ್ತಿಲ್ಲ. ಇದು ನನ್ನ ಪಾಲಿಗೆ ಸ್ಮರಣೀಯ ಕ್ಷಣ’’ ಎಂದು ರೋಜರ್ಸ್ ಪ್ರತಿಕ್ರಿಯಿಸಿದರು.







