ವೆಂಕಪ್ಪ ಗೌಡರಿಂದ ಸಣ್ಣತನ ಪ್ರದರ್ಶನ : ಬಿಜೆಪಿ
ಸುಳ್ಯ:ಸಣ್ಣ ವಿಷಯವನ್ನು ಕಾಂಗ್ರೆಸ್‌ನವರು ದೊಡ್ಡದು ಮಾಡುವ ಮೂಲಕ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡರು ತನ್ನ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ನೀರಿನ ಕೊರತೆ ಬಿದ್ದಾಗ ನೀರು ಸರಬರಾಜು ಸಿಬ್ಬಂದಿ 24 ಗಂಟೆ ಕೆಲಸ ಮಾಡಿದ್ದು, ಅವರಿಗೆ ಗುತ್ತಿಗೆದಾರರು ಊಟ ಕೊಟ್ಟಿದ್ದಾರೆ. ನೀರು ಪೂರೈಕೆ ವಿಚಾರವಾಗಿ ವಿರೋಧ ಪಕ್ಷದವರೂ ಅಧ್ಯಕ್ಷರ ಕೆಲಸವನ್ನು ಕೊಂಡಾಡಿದ್ದಾರೆ. ಆದರೆ ಪಂಪ್ ಹೌಸ್‌ನಲ್ಲಿ ಊಟ ಕೊಟ್ಟಿದ್ದು ತಪ್ಪು. ಅಧ್ಯಕ್ಷರು ಕೆಲಸದವರ ಬೆನ್ನು ತಟ್ಟುವ ಕೆಲಸ ಮಾಡಲು ಅಲ್ಲಿಗೆ ಹೋಗಿದ್ದಾರೆ. ಈ ವಿಚಾರವಾಗಿ ಪಂಚಾಯಿತಿ ಸದಸ್ಯರೊಬ್ಬರು ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಪ್ರಕಾಶ್ ಹೆಗ್ಡೆ ಅಧ್ಯಕ್ಷರಾದ ಬಳಿಕ ಸಾಕಷ್ಟು ಕೆಲಸಗಳು ಆಗಿವೆ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಮಂಜೂರಾದ ಕಾಮಗಾರಿಗಳೊಂದಿಗೆ ಪಂಚಾಯಿತಿಯ ನೇರ ತೆರಿಗೆಯಿಂದ ಬಂದ ಹಣದಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ. ಪುತ್ತೂರಿಗೆ ದೊಡ್ಡ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದ್ದರೂ ಸುಳ್ಯ ನಗರ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತವಿದೆ ಎಂಬ ಕಾರಣದಿಂದ ಕಾಂಗ್ರೆಸ್‌ನ ಇಲ್ಲಿನ ಮುಖಂಡರು ಅನುದಾನ ಬಾರದಿರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು.
ಪಕ್ಷದ ಮುಖಂಡ ಪಿ.ಕೆ.ಉಮೇಶ್ ಮಾತನಾಡಿ, ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅವರ ಜನಪ್ರಿಯತೆಯನ್ನು ಸಹಿಸಲು ಆಗದ ಹೊಟ್ಟೆಕಿಚ್ಚಿನಿಂದ ಕಾಂಗ್ರೆಸ್‌ನವರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶವಿಲ್ಲ. ಎಲ್ಲಿಯೂ ಕುಳಿತುಕೊಳ್ಳಲು ಜಾಗ ಇಲ್ಲದವರು ರಸ್ತೆ ಬದಿ ಕುಳಿತುಕೊಳ್ಳುತ್ತಾರೆ. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸದಸ್ಯ ಕಿರಣ್ ಕುರುಂಜಿ, ಬಿಜೆಪಿ ನಗರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಬೂಡುಪನ್ನೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







