ಇಸ್ರೇಲ್: ನೆತನ್ಯಾಹು ಸಂಪುಟಕ್ಕೆ ಇನ್ನೊಬ್ಬ ಸಚಿವ ರಾಜಿನಾಮೆ

ಜೆರುಸಲೇಂ, ಮೇ 28: ತೀವ್ರಬಲಪಂಥೀಯರನ್ನು ಸೇರಿಸಿ ಸಚಿವ ಸಂಪುಟವನ್ನು ವಿಸ್ತರಿಸುವ ಬೆಂಜಮಿನ್ ನೆತನ್ಯಾಹುರ ನಿರ್ಧಾರವನ್ನು ಪ್ರತಿಭಟಿಸಿ ಮತ್ತೊಬ್ಬ ಸಚಿವ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಪರಿಸರ ಸಚಿವ ಹಾಗೂ ಕುಲನು ಪಾರ್ಟಿಯ ಮುಖಂಡರಾದ ಅವಿ ಗಬಾಯಿಲ್ ಶುಕ್ರವಾರ ತನ್ನ ರಾಜಿನಾಮೆಂನ್ನು ನೆತನ್ಯಾಹುಗೆ ಕಳುಹಿಸಿಕೊಟ್ಟಿದ್ದಾರೆ.ಇತ್ತೀಚೆಗೆ ನೆತನ್ಯಾಹು ತೀವ್ರ ಬಲಪಂಥೀಯ ಎನ್ನಲಾಗುವ ’ಇಸ್ರೇಲ್ ಬೈತನು’ ಪಾರ್ಟಿಯ ಲಿಬರ್‌ಮ್ಯಾನ್‌ರನ್ನು ಗೃಹಸಚಿವರಾಗಿ ನೇಮಿಸಿದ್ದರು. ಇದನ್ನು ಪ್ರತಿಭಟಿಸಿ ಈಗ ಗಬಾಯಿಲ್ ರಾಜಿನಾಮೆ ನೀಡಿದ್ದಾರೆ.
ಪ್ರಧಾನ ಮಂತ್ರಿಯ ನಿರ್ಧಾರಗಳನ್ನು ಗಂಟಲು ಸ್ಪರ್ಶಿಸದೆ ನುಂಗಿ ಬಿಡಲು ಸಾಧ್ಯವಿಲ್ಲ ಎಂದು ಗಬಾಯಿಲ್ ತನ್ನ ರಾಜೀನಾಮೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ನೆತನ್ಯಾಹು ತನ್ನ ನಿಲುವಿನಲ್ಲಿ ಬದಲಾವಣೆ ತಾರದಿದ್ದರೆ ದೇಶ ತೀವ್ರ ಆಘಾತವನ್ನು ಎದುರಿಸಬೇಕಾಗಬಹುದು. ಅಮೆರಿಕದ ಮಿತ್ರ ದೇಶಗಳ ಬೆಂಬಲವನ್ನು ಇಸ್ರೇಲ್ ಕಳಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ನೆತನ್ಯಾಹು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ ಎರಡನೆ ಸಚಿವ ಗಬಾಯಿಲ್ ಆಗಿದ್ದಾರೆ. ಇವರದೇ ಪಕ್ಷದ ಮೋಶೆ ಯಲೊನ್ ಈ ಮೊದಲು ರಾಜೀನಾಮೆ ನೀಡಿದ್ದರು. 120ಸದಸ್ಯ ಬಲದ ಪಾರ್ಲಿಮೆಂಟ್‌ನಲ್ಲಿ ನೆತನ್ಯಾಹುರ ಲಿಕುಡ್ ಪಕ್ಷಕ್ಕೆ ಕೇವಲ 30 ಸದಸ್ಯರಿದ್ದಾರೆ. ಇತರ ಸಣ್ಣಪುಟ್ಟ ಪಾರ್ಟಿಗಳ ಬೆಂಬಲದಲ್ಲಿ ಅವರು ಸರಕಾರವನ್ನು ಮುನ್ನಡೆಸುತ್ತಿದ್ದಾರೆ.





