ಬ್ಲ್ಯಾಕ್‌ಮೇಲ್ ಪ್ರಕರಣ : ಮೂಡುಬಿದಿರೆ ಬಜರಂಗದಳದ ಕಾರ್ಯಕರ್ತ ಸಹಿತ ಐವರ ಬಂಧನ

ಮೂಡುಬಿದಿರೆ : ಕಳೆದ ಕೆಲವು ಸಮಯಗಲಿಂದ ಹಣಕ್ಕಾಗಿ ಬೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಬಜರಂಗದಳ ಸಂಚಾಲಕ, ಸಂತೋಷ್ ಪೂಜಾರಿ ಸಹಿತ ಐವರನ್ನು ಮೂಡುಬಿದಿರೆ ಪೊಲೀಸರು ರೆಡ್‌ಹ್ಯಾಂಡಾಗಿ ಹಿಡಿದು ಬಂಧಿಸಿದ ಘಟನೆ ಶನಿವಾರ ಮೂಡುಬಿದಿರೆಯಲ್ಲಿ ನಡೆದಿದೆ.
ಪುತ್ತಿಗೆ ಗುಡ್ಡೆಯಂಗಡಿಯ ನಿವಾಸಿ ರಾಘವೇಂದ್ರ ಭಟ್ ಎಂಬವರಿಗೆ ಸಂತೋಷ್ ಪೂಜಾರಿ ವಿಷಯವೊಂದನ್ನು ಮುಂದಿಟ್ಟು ಫೋನ್ ಮಾಡಿ ಬೆದರಿಸಿ 2 ಲಕ್ಷ ರೂಪಾಯಿಗಳನ್ನು ನೀಡದೆ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ರಾಘವೇಂದ್ರ ಭಟ್ ಅವರು ಪೊಲೀಸರ ಸಹಾಯ ಕೋರಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ತನಿಖೆಗಿಳಿದು ಸಂತೋಷ್‌ನನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುವ ಕಾರ್ಯಾಚರಣೆಗಿಳಿದಿದ್ದರು.
ಪೊಲೀಸರು ತಿಳಿಸಿದಂತೆ ರಾಘವೇಂದ್ರ ಭಟ್ ಅವರು ಕಾರ್ಯಾಚರಣೆಗೆ ಸಹಕರಿಸಿದ್ದರು. ಸಂತೋಷ್ ಪೂಜಾರಿ ಹಣಕ್ಕಾಗಿ ರಾಘವೇಂದ್ರ ಭಟ್ ಅವರಿಗೆ ಕರೆ ಮಾಡಿ ಹಣ ಪಡೆಯಲು ತಮ್ಮ ಮನೆಗೆ ಬರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಚಿತವಾಗಿ ರಾಘವೇಂದ್ರ ಭಟ್ ಅವರ ಮನೆಗೆ ತೆರಳಿದ್ದರು. ಸಂತೋಷ್ ಮನೆಗೆ ಬಂದು ವ್ಯವಹಾರ ಕುದುರಿಸುತ್ತಿದ್ದಂತೆಯೇ ರೆಡ್‌ಹ್ಯಾಂಡಾಗಿ ಹಿಡಿದ ಪೊಲೀಸರು ಬಂಧಿಸಿದ್ದಾರೆ.ಸಂತೋಷ್ ಜೊತೆಗೆ ಈ ಕೃತ್ಯದಲ್ಲಿ ಮೂಡುಬಿದಿರೆ ಗಾಂಧಿನಗರದ ವೆಲ್ಡಿಂಗ್ ಶಾಪ್‌ನ ಪ್ರವೀಣ ಸಹಿತ ಬಂಟ್ವಾಳ, ಮಂಗಳೂರು ಕಾಪಿಕಾಡ್, ಅಡ್ಯಾರಿನ ನಿವಾಸಿಗಳಾದ ಮೂವರು ಭಾಗಿಯಾಗಿದ್ದು ಅವರನ್ನು ಕೂಡಾ ಮೂಡುಬಿದಿರೆ ಬಸ್ಸು ನಿಲ್ದಾಣದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಸೈನಿಕನಾಗಿ ದೇಶ ಸೇವೆ ಮಾಡಿ ಅನಾರೋಗ್ಯದ ಕಾರಣದಿಂದ ಸೈನ್ಯವನ್ನು ತೊರೆದಿರುವ ಸಂತೋಷ್ ಪೂಜಾರಿ ಇತ್ತೀಚಿಗೆ ಮೂಡುಬಿದಿರೆಯಲ್ಲಿ ಮೊಬೈಲ್ ಅಂಗಡಿಯೊಂದನ್ನು ತೆರೆದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಮೂಡುಬಿದಿರೆ ಪರಿಸರದಲ್ಲಿ ದನಸಾಗಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಈತನ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೆಲವೊಂದು ಪ್ರಕರಣಗಳು ದಾಖಲಾಗಿವೆ.







